“ನಾನು ಯಾವ ದೈವದ ಭಕ್ತನೂ ಅಲ್ಲ, ನಾನು ಸಂವಿಧಾನದ ಭಕ್ತ. ನಾನು ಬುದ್ಧ, ಬಸವ, ಅಂಬೇಡ್ಕರ್, ನಾರಾಯಣ ಗುರು ಹಾಗೂ ನಿಜಶರಣ ಅಂಬಿಗರ ಚೌಡಯ್ಯ ಪ್ರತಿಪಾದಿಸಿದ ಸಮಾನತೆ, ಸ್ವಾಭಿಮಾನ ತತ್ವಗಳ ಭಕ್ತ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, “ದಯೆಯೇ ಧರ್ಮ, ಮಾನವತೆಯೇ ಪರಮದೈವ ಎಂದು ನಂಬಿದವನು ನಾನು, ಸಂವಿಧಾನದಲ್ಲಿ ಆಸ್ತಿಕನಿಗೂ ನಾಸ್ತಿಕನಿಗೂ ಸಮಾನ ಅವಕಾಶವಿದೆ, ಸಮಾನ ಹಕ್ಕುಗಳಿವೆ.. ಇದನ್ನು ಬಿಜೆಪಿಯವರು ಅರಿತುಕೊಳ್ಳಬೇಕು” ಎಂದಿದ್ದಾರೆ.
“ಬಹುಶಃ ನಾನು ಪರಂಪರೆಯ ದೇವಾಲಯಗಳನ್ನು ಸಂದರ್ಶಿಸಿದಷ್ಟು ಬಿಜೆಪಿಯವರು ಹೋಗಿರಲಿಕ್ಕಿಲ್ಲ! ನಾನು ಕಾಶಿ, ಮಥುರಾ, ಬುದ್ಧಗಯಾ, ಅಜ್ಮಿರ್ ದರ್ಗಾ, ಚರ್ಚ್ ಸೇರಿದಂತೆ ಹಲವು ಧಾರ್ಮಿಕ ಕ್ಷೇತ್ರಗಳನ್ನು ಸಂದರ್ಶಿದ್ದೇನೆ, ಭಕ್ತನಾಗಿ ಅಲ್ಲ, ಅಧ್ಯಯನಕಾರನಾಗಿ. ವಿವಿಧ ಕಲೆ, ಸಂಸ್ಕೃತಿ, ಆಚಾರ, ವಿಚಾರ, ಇತಿಹಾಸಗಳನ್ನು ಅಧ್ಯಯನ ಮಾಡುವುದು ನನ್ನ ಆಸಕ್ತಿ. ಮುಂದೆಯೂ ನನ್ನ ಈ ಅಧ್ಯಯನದ ಪ್ರವಾಸಗಳನ್ನು ಮಾಡುತ್ತಿರುತ್ತೇನೆ” ಎಂದರು.
“ಭಕ್ತಿ, ನಂಬಿಕೆಗಳನ್ನು ಬಲವಂತವಾಗಿ ಹೇರುವುದಕ್ಕೂ ಸಾಧ್ಯವಿಲ್ಲ, ಬಲವಂತವಾಗಿ ಕಿತ್ತು ಹಾಕಲೂ ಸಾಧ್ಯವಿಲ್ಲ ಎಂಬ ಸತ್ಯವನ್ನು ಟೀಕಿಸುವವರು ಅರ್ಥ ಮಾಡಿಕೊಂಡರೆ ಒಳಿತು. ನನ್ನ ಭಕ್ತಿ ಏನಿದ್ದರೂ ಸತ್ಯ, ಸಮಾನತೆಯೆಡೆಗೆ ಮಾತ್ರ. ಯಾರನ್ನೋ ಮೆಚ್ಚಿಸಲು ಡಾಂಬಿಕ ದೈವಭಕ್ತನಂತೆ ತೋರಿಸಿಕೊಳ್ಳುವುದು ನನ್ನ ಜಾಯಮಾನವಲ್ಲ. ಹಾಗೆಯೇ, ರಾಜಕಾರಿಣಿಯೊಬ್ಬನ ಮೌಲ್ಯಮಾಪನವನ್ನು ಆತನ ಕೆಲಸಗಳಿಂದ ಮಾಡಬೇಕೇ ಹೊರತು ಆತನ ಭಕ್ತಿಯಿಂದಲ್ಲ ಎಂಬ ವಾಸ್ತವವನ್ನು ಟೀಕಾಕಾರರು ಅರಿತುಕೊಳ್ಳಬೇಕು” ಎಂದು ಹೇಳಿದರು.
“ಕಣ್ಣಿನಲ್ಲಿ ಕಾಮ, ಮನದಲ್ಲಿ ಕ್ರೋಧ ಪ್ರಾಣದಲ್ಲಿ ಲೋಭ, ಬುದ್ಧಿಯಲ್ಲಿ ಮದ ವಿವೇಕದಲ್ಲಿ ಮತ್ಸರ ಅರುಹಿನಲ್ಲಿ ಮಾಯವುಳ್ಳನ್ನಕ್ಕರ ಎಂತು ಭಕ್ತನೆಂಬೆ?” ಎಂಬ ವಚನ ಉಲ್ಲೇಖಿಸಿ ಟೀಕಿಸುವರಿಗೆ ಅರ್ಪಿಸುತ್ತೇನೆ” ಎಂದರು.