ತುಮಕೂರು : ಉದ್ಘಾಟನೆ ದಿನವೇ ತುಮಕೂರು (KSRTC) ಹೈಟೆಕ್ ಬಸ್ ನಿಲ್ದಾಣ ಬಾಗಿಲು ಮುಚ್ಚಿದೆ. ಕೇಂದ್ರದ ಯೋಜನೆಯ ಈ ಕಾಮಗಾರಿ ತಮ್ಮದೆಂದು ಬಿಂಬಿಸಿಕೊಳ್ಳಲು ಹೋದ ರಾಜ್ಯ ಸರ್ಕಾರ ಎಡವಟ್ಟು ಮಾಡಿ ಮುಜುಗರ ಅನುಭವಿಸಿದೆ.
ತುಮಕೂರಿನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಉದ್ಘಾಟನೆಯಾದ ದಿನವೇ ಬಾಗಿಲು ಹಾಕಿದೆ. ಕಳೆದ ಜನವರಿ 29ರಂದು ಸಿಎಂ ಸಿದ್ದರಾಮಯ್ಯ ಉದ್ಘಾಟನೆ ಮಾಡಿದ್ದರು. ವಿಪರ್ಯಾಸ ಅಂದರೆ ಈವೆರಗೂ ಒಂದು ಬಸ್ಸು ಓಡಾಡಿಲ್ಲ. ಉದ್ಘಾಟನೆಯಾಗಿ 10 ದಿನ ಕಳೆದರೂ ಜನ ಸೇವೆಗೆ ಮುಕ್ತವಾಗಿಲ್ಲ.
ಜನವರಿ 29ರಂದು ಸಿಎಂ ಸಿದ್ದರಾಮಯ್ಯ, ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಜಿಲ್ಲಾ ಉಸ್ತುವಾರಿ ಸಚಿವ ಪರಮೇಶ್ವರ್ ಸೇರಿದಂತೆ ಅನೇಕ ನಾಯಕರು ಹೈಟೆಕ್ ಬಸ್ ನಿಲ್ದಾಣಕ್ಕೆ ನಿಶಾನೆ ತೋರಿದರು. ತುಮಕೂರಿನ ಅಶೋಕ ರಸ್ತೆಯಲ್ಲಿ ನಿರ್ಮಾಣವಾಗುತ್ತಿರುವ ನೂತನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣವನ್ನು ಉದ್ಘಾಟನೆ ಮಾಡಿದ್ದರು. ಆದರೆ ಅದೇ ದಿನ ಸಂಜೆ ಸೂರ್ಯಾಸ್ತವಾಗುವ ಮೊದಲೇ ಬಸ್ ನಿಲ್ದಾಣದ ಬಾಗಿಲು ಮುಚ್ಚಲಾಗಿದೆ. ಬಸ್ ನಿಲ್ದಾಣಕ್ಕೆ ತಾತ್ಕಾಲಿಕವಾಗಿ ನಿರ್ಮಿಸಿದ ಎರಡೂ ಗೇಟಿಗೆ ಬೀಗ ಹಾಕಲಾಗಿದೆ. ಬಸ್‌ಗಳ ಓಡಾಟ ಇರಲಿ ಜನರೂ ಹೋಗದಂತೆ ಬಂದ್ ಮಾಡಲಾಗಿದೆ
ಬಸ್ ನಿಲ್ದಾಣದ ಕಾಮಗಾರಿ ಪ್ರಗತಿಯಲ್ಲಿದ್ದು ಇನ್ನೂ ನಿರ್ಮಾಣ ಹಂತದಲ್ಲಿದೆ. ಹೊರನೋಟಕ್ಕೆ ಕಾಣುವಂತೆ ಹೊರಗಿನ ಮೇಲ್ಮಟ್ಟದ ಕಾಮಗಾರಿಯನ್ನು ಮುಗಿಸಿ ಮೊದಲ ಹಂತದ ಕಾಮಗಾರಿ ಎಂದು ಬಿಂಬಿಸಿ ಉದ್ಘಾಟನೆ ಮಾಡಲಾಗಿದೆ. ಕಾಮಗಾರಿ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಹೊಸ ಬಸ್ ನಿಲ್ದಾಣ ಉದ್ಘಾಟನೆಗೆ ಸೀಮಿತವಾಗಿದೆ. ಇನ್ನೂ 40%ರಷ್ಟಾದರೂ ಕಾಮಗಾರಿ ಬಾಕಿ ಉಳಿದಿರುವ ಹಿನ್ನೆಲೆಯಲ್ಲಿ ಬಸ್‌ಗಳ ಕಾರ್ಯಾಚರಣೆ ಮಾಡದಿರಲು ಕೆಎಸ್‌ಆರ್‌ಟಿಸಿ ನಿರ್ಧಾರ ಮಾಡಿದೆ. ಹೀಗಾಗಿ ನೂತನ ಬಸ್ ನಿಲ್ದಾಣವನ್ನು ಉದ್ಘಾಟನೆ ದಿನವೇ ಪುನಃ ಮುಚ್ಚಲಾಗಿದೆ.