ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಚುನಾವಣೆಯು ಸಮೀಪಿಸುತ್ತಿರುವಂತೆ ಬಿಜೆಪಿ ಪ್ರಚಾರ ಬಿರುಸುಗೊಂಡಿದ್ದು, ಬಿಜೆಪಿ ಅಭ್ಯರ್ಥಿ ಸೀಕಲ್ ರಾಮಚಂದ್ರಗೌಡ ಅವರು ತಾಲ್ಲೂಕಿನ ಕಸಬಾ ಹೋಬಳಿ ವ್ಯಾಪ್ತಿಯ ಆನೂರು, ತುಮ್ಮನಹಳ್ಳಿ, ಕೊತ್ತನೂರು, ದೇವರ ಮಳ್ಳೂರು, ವೈ ಹುಣಸೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರಮುಖ ಮುಖಂಡರೊಂದಿಗೆ ಮನೆ ಮನೆಗೆ ಭೇಟಿ ನೀಡಿ ಅಬ್ಬರದ ಪ್ರಚಾರ ನಡೆಸಿದರು.
ಗ್ರಾಮಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಗ್ರಾಮದ ಮಹಿಳೆಯರು ಆರತಿ ಬೆಳಗಿ ಸ್ವಾಗತಿಸಿದರು. ಗ್ರಾಮದ ಯುವಕರು ಪಟಾಕಿ ಸಿಡಿಸಿ ಬಿಜೆಪಿ ಅಭ್ಯರ್ಥಿಗೆ ಸ್ವಾಗತಿಸಿ ಮೋದಿ ಮತ್ತು ಬಿಜೆಪಿಗೆ ಜಯಘೋಷ ಕೂಗಿದರು. ಪ್ರಚಾರದ ಸಂದರ್ಭದಲ್ಲಿ ತುಮ್ಮನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ತಿಪ್ಪೇನಹಳ್ಳಿ ಗ್ರಾಮದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸೀಕಲ್ ರಾಮಚಂದ್ರಗೌಡ ಅವರು, ಚುನಾವಣೆಗೆ ಇನ್ನು ಕೇವಲ ಆರು ದಿನ ಬಾಕಿ ಉಳಿದಿದೆ. ಮುಂದಿನ ಐದು ದಿನದಲ್ಲಿ ಬಹಿರಂಗ ಪ್ರಚಾರವನ್ನು ಅಂತ್ಯಗೊಳಿಸಬೇಕಾಗಿದೆ. ಹೀಗಾಗಿ ದಿನವಿಡೀ ಗ್ರಾಮೀಣ ಭಾಗಗಳು ಮತ್ತು ನಗರ ಪ್ರದೇಶದ ಮನೆ ಮನೆಗೆ ತೆರಳಿ ಕಾರ್ಯಕರ್ತರು ಮತ್ತು ಪಕ್ಷದ ಮುಖಂಡರು ಪ್ರಚಾರ ನಡೆಸುತ್ತಿದ್ದಾರೆ. ಗ್ರಾಮ ಪಂಚಾಯಿತಿ ವಾರು ನಾನು ಮನೆ ಮನೆಗೆ ತೆರಳಿ ಪ್ರಚಾರ ಮಾಡುತ್ತಿದ್ದೇನೆ ಎಂದರು.
ನಗರ ಪ್ರದೇಶದಲ್ಲಿ ಬಿಜೆಪಿ ಪಕ್ಷಕ್ಕೆ ಉತ್ತಮ ಬೆಂಬಲ ವ್ಯಕ್ತವಾಗಿದೆ. ಗ್ರಾಮೀಣ ಭಾಗದಲ್ಲಿಯೂ ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಸಾಮಾನ್ಯ ಜನರಲ್ಲಿ ಉತ್ತಮ ಅಭಿಪ್ರಾಯ ವ್ಯಕ್ತವಾಗಿದ್ದು, ದೇಶ ಮತ್ತು ರಾಜ್ಯದ ಅಭಿವೃದ್ಧಿಗೆ ಜನತೆ ಈ ಬಾರಿ ಬಿಜೆಪಿ ಪಕ್ಷವನ್ನು ಬಹುಮತದಿಂದ ಅಧಿಕಾರಕ್ಕೆ ತರಲು ನಿರ್ಧಾರ ಮಾಡಿರುವುದು ಕಂಡು ಬರುತ್ತಿದ್ದು, ಶಿಡ್ಲಘಟ್ಟ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಗೆಲುವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಪಕ್ಷದ ಪ್ರಮುಖರಾದ ಮಳಮಾಚನಹಳ್ಳಿ ಎಂ. ರವಿಕುಮಾರ್, ಬಿ ರವಿ, ಚಿಕನ್ ವಿಜಿ, ಟಿ.ಪಿ.ಮುನಿರಾಜು, ಲೋಕೇಶ್, ರಘುನಂದನ್, ಶಿವರಾಜು, ಚಂದ್ರಪ್ಪ, ಗುರುಮೂರ್ತಿ, ರಕ್ಷಿತ್, ಕಿಶೋರ್ ರೆಡ್ಡಿ, ಮೋಹನ್ ಕುಮಾರ್, ಗಣೇಶ್, ಸಂಪತ್ ಕುಮಾರ್, ಅಭಿ, ಸುಬ್ರಮಣ್ಯ ಮತ್ತಿತರರು ಉಪಸ್ಥಿತರಿದ್ದರು.