ಮಂಡ್ಯ : ತಾಲೂಕಿನ ಕೆರಗೋಡು ಹನುಮ ಧ್ವಜ ತೆರವು ಖಂಡಿಸಿ ನಾಳೆ ಬಜರಂಗದಳ ಸೇರಿದಂತೆ ವಿವಿಧ ಹಿಂದೂ ಪರ ಸಂಘಟನೆಗಳು ಮಂಡ್ಯ ನಗರ, ಕೆರಗೋಡು ಗ್ರಾಮ ಬಂದ್ಗೆ ಕರೆ ಕೊಟ್ಟಿದೆ. ಬಜರಂಗದಳ, ವಿಶ್ವ ಹಿಂದೂ ಪರಿಷತ್, ಶ್ರೀರಾಮಭಜನಾ ಮಂಡಳಿ ನೀಡಿದ ಬಂದ್ಗೆ ಕರೆಗೆ ಇಂದು ನಡೆಯುವ ಸಭೆಯ ನಂತರ ಬಿಜೆಪಿ (BJP) ಬೆಂಬಲ ಸೂಚಿಸುವ ಸಾಧ್ಯತೆ ಇದೆ.
ಜಿಲ್ಲಾಡಳಿತ ಬಂದ್ ಕೈಬಿಡುವಂತೆ ಮನವಿ ಮಾಡಿದರೂ ಖ್ಯಾರೆ ಎನ್ನದ ಹಿಂದೂಪರ ಸಂಘಟನೆಗಳು ನಾಳೆ ಬಂದ್ ನಡೆಸಲು ಮುಂದಾಗಿವೆ. ಈ ಹಿನ್ನೆಲೆ, ಇಂದು ಮಧ್ಯಾಹ್ನ ಜಿಲ್ಲಾ ಬಿಜೆಪಿ ಸಭೆ ಕರೆದಿದ್ದು, ಚರ್ಚೆ ನಡೆಸಿ ತೀರ್ಮಾನ ಪ್ರಕಟಿಸುವ ಸಾಧ್ಯತೆ ಇದೆ. ಆದರೆ, ಪ್ರತಿಭಟನೆಯಲ್ಲಿ ಕೈಜೋಡಿಸಿದ್ದ ಮೈತ್ರಿ ಪಕ್ಷ ಜೆಡಿಎಸ್ ಮಂಡ್ಯ ಬಂದ್ನಿಂದ ಅಂತರ ಕಾಯ್ದುಕೊಂಡಿದೆ.
ವಿವಾದ ಪ್ರಾರಂಭದಲ್ಲಿ ಬಿಜೆಪಿ, ಹಿಂದೂಪರ ಸಂಘಟನೆಗಳಿಗೆ ಜೆಡಿಎಸ್ ಸಾಥ್ ನೀಡಿತ್ತು. ಜೊತೆಗೆ ದಳ ನಾಯಕರು ಪಾದಯಾತ್ರೆ ಮಾಡಿದ್ದರು. ಆನಂತರ ಹೋರಾಟದಿಂದ ಜೆಡಿಎಸ್ ಹಿಂದೆ ಸರಿದಿದೆ. ಅದಾಗ್ಯೂ, ಬಿಜೆಪಿ ಜೆಡಿಎಸ್ ಬಿಟ್ಟು ಮನೆ ಮನೆಗೆ ಹನುಮ ಧ್ವಜ ಕಟ್ಟುವ ಅಭಿಯಾನ ನಡೆಸುತ್ತಿದೆ.
ಫೆಬ್ರವರಿ 9 ರ ಬಂದ್ ಬೆಂಬಲದ ಬಗ್ಗೆ ಜೆಡಿಎಸ್ ಅಭಿಪ್ರಾಯ ತಿಳಿಸಿಲ್ಲ. ಮಾಜಿ ಪ್ರಧಾನಿಯೂ ಆಗಿರುವ ಜೆಡಿಎಸ್ ವರಿಷ್ಠ ಹೆಚ್ಡಿ ದೇವೇಗೌಡ ಅವರು “ಪ್ರತಿಭಟನೆಯಲ್ಲಿ ಕೇಸರಿ ಶಾಲು ಹಾಕಬಾರದಿತ್ತು, ಹಸಿರು ಶಾಲು ಹಾಕಬೇಕಿತ್ತು” ಎಂಬ ಹೇಳಿಕೆಯಿಂದಲೇ ಕುಮಾರಸ್ವಾಮಿ ಮತ್ತು ಇತರೆ ನಾಯಕರು ಹಿಂದೇ ಸರಿದಿದ್ದಾರೆಯೇ ಎನ್ನುವ ಪ್ರಶ್ನೆ ಉದ್ಭವಿಸಿದೆ.