ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿಯವರು ಜನವರಿ 19 ರಂದು ಶುಕ್ರವಾರ ಕರ್ನಾಟಕಕ್ಕೆ ಭೇಟಿ ನೀಡಲಿದ್ದಾರೆ. ಬೆಳಗ್ಗೆ 9.35ಕ್ಕೆ ದೆಹಲಿಯಿಂದ ಹೊರಟು ನೇರವಾಗಿ ಕಲಬುರಗಿಗೆ ತೆರಳಲಿದ್ದಾರೆ.
ಕಲಬುರಗಿ ವಿಮಾನ ನಿಲ್ದಾಣದಿಂದ 9.40ಕ್ಕೆ ಹೆಲಿಕಾಫ್ಟರ್ ಮೂಲಕ ಮಹಾರಾಷ್ಟ್ರದ ಸೊಲ್ಲಾಪುರಕ್ಕೆ ಹೋಗುತ್ತಾರೆ. ಬಳಿಕ ಮಧ್ಯಾಹ್ನ 12.10ಕ್ಕೆ ಹೆಲಿಕಾಫ್ಟರ್ ಮೂಲಕ ಸೊಲ್ಲಾಪುರದಿಂದ ಪುನಃ ಮಧ್ಯಾಹ್ನ 1 ಗಂಟೆಗೆ ಕಲಬುರಗಿ ವಿಮಾನ ನಿಲ್ದಾಣಕ್ಕೆ ಬರುತ್ತಾರೆ.
1.05 ಕ್ಕೆ ವಿಶೇಷ ವಿಮಾನದ ಮೂಲಕ ಕಲಬುರಗಿಯಿಂದ ಹೊರಟು ಮಧ್ಯಾಹ್ನ 2.10ಕ್ಕೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲಪುತ್ತಾರೆ. 2.15ಕ್ಕೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣನಿಂದ ರಸ್ತೆ ಮಾರ್ಗವಾಗಿ ದೇವನಹಳ್ಳಿ ತಾಲೂಕಿನ ಭಟ್ಟರ ಮಾರನಹಳ್ಳಿಗೆ ಪ್ರಯಾಣ ಬೆಳೆಸುತ್ತಾರೆ.
2.45ಕ್ಕೆ ಭಟ್ಟರಮಾರನಹಳ್ಳಿಗೆ ತಲುಪಲಿರುವ ಪ್ರಧಾನಿ ಮೋದಿ, ಬಿಐಇಟಿಸಿ ಉದ್ಘಾಟನೆ ಮತ್ತು ಬೋಯಿಂಗ್ ಸುಕನ್ಯಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಮಧ್ಯಾಹ್ನ 3.45ಕ್ಕೆ ಭಟ್ಟರ ಮಾರನಹಳ್ಳಿಯಿಂದ ನಿರ್ಗಮಿಸಿ, 3.55ಕ್ಕೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುಪಲಿದ್ದಾರೆ. ಸಂಜೆ 4 ಗಂಟೆಗೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಚೆನ್ನೈಗೆ ತೆರಳಲಿದ್ದಾರೆ.
ಇನ್ನು ಪ್ರಧಾನಿ ಮೋದಿ ಆಗಮನ ಹಿನ್ನೆಲೆಯಲ್ಲಿ ಇಂದು (ಜ.17) ಎಸ್ಪಿಜಿ ಅಧಿಕಾರಿಗಳು ಕಲಬುರಗಿ ವಿಮಾನ ನಿಲ್ದಾಣ ಪರಿಶೀಲನೆ ಮಾಡಿದರು. ಎಸ್ಪಿಜಿ ಅಧಿಕಾರಿಗಳಿಗೆ ಸ್ಥಳೀಯ ಪೊಲೀಸರು ಸಾಥ್ ನೀಡಿದ್ದಾರೆ.