ಬೆಂಗಳೂರು : ರಾಜ್ಯದ ಡೂಪ್ಲಿಕೇಟ್ ಸಿಎಂ ಹಾಗೂ ಟೆಂಪ್ರವರಿ ಸಿಎಂ ತೆಲಂಗಾಣದಲ್ಲಿ ಚುನಾವಣಾ ಪ್ರಚಾರಕ್ಕೆ ಹೋಗಿ, ನಗೆಪಾಟಲಿಗೆ ಗುರಿಯಾಗಿದ್ದಾರೆ. ರಾಜ್ಯದ ಜನರಿಗೆ ಗ್ಯಾರಂಟಿ ಹೆಸರಿನಲ್ಲಿ ಕಿವಿಗೆ ಹೂವು ಮುಡಿಸಿದ್ದಾರೆ ಎಂದು ಮಾಜಿ ಸಿಎಂ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತೆಲಂಗಾಣ ಚುನಾವಣಾ ಪ್ರಚಾರಕ್ಕೆ ತೆರಳಿರುವ ಕುರಿತು ಮಾತನಾಡಿದ ಅವರು, ತೆಲಂಗಾಣದಲ್ಲಿ 2 ಲಕ್ಷ ಸರ್ಕಾರಿ ಹುದ್ದೆ ಭರ್ತಿ ಮಾಡುವುದಾಗಿ ರಾಜ್ಯ ಕಾಂಗ್ರೆಸ್ ನಾಯಕರು ಹೇಳಿದ್ದಾರೆ. ಕರ್ನಾಟಕದಲ್ಲೇ 2 ಲಕ್ಷಕ್ಕೂ ಹೆಚ್ಚು ಸರ್ಕಾರಿ ಹುದ್ದೆಗಳು ಖಾಲಿ ಇವೆ. ಮೊದಲು ರಾಜ್ಯದಲ್ಲಿ ಖಾಲಿ ಇರುವ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಿ. ಅದನ್ನು ಬಿಟ್ಟು ತೆಲಂಗಾಣಕ್ಕೆ ಹೋಗಿ ಮತದಾರರಿಗೆ ಸುಳ್ಳು ಭರವಸೆ ನೀಡುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಐದು ಗ್ಯಾರಂಟಿಗಳ ಭಜನೆಗಳನ್ನ ನಿತ್ಯ ಕೇಳುತ್ತಿದ್ದೇವೆ. ಐದು ಗ್ಯಾರಂಟಿ ಪೈಕಿ ನಾಲ್ಕು ಜಾರಿ ಮಾಡಿದ್ದೇವೆ ಎಂದು ಹೇಳಿದ್ದಾರೆ. ಗ್ಯಾರಂಟಿಗಳನ್ನ ರಾಷ್ಟ್ರಾದ್ಯಂತ ಜಾರಿಗೆ ತರಲು ಕಾಂಗ್ರೆಸ್ ಹೊರಟಿದೆ. ಪಂಚ ರಾಜ್ಯದ ಚುನಾವಣೆಯಲ್ಲೂ ಇದೇ ಮಾದರಿ ಜಾರಿಗೆ ತರಲು ಕಾಂಗ್ರೆಸ್ ಹೊರಟಿದೆ. ಈ ರೀತಿ ಕಾರ್ಯಕ್ರಮಗಳಿಗೆ ಮರುಳಾಗದಂತೆ ಪಂಚರಾಜ್ಯದ ಮತದಾರರಿಗೆ ಮನವಿ ಮಾಡಿಕೊಳ್ಳುತ್ತೇನೆ ಎಂದರು.