ಬೆಂಗಳೂರು: ಗಣಿ ಅಧಿಕಾರಿ ಪ್ರತಿಮಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರು ಚಾಲಕ ಕಿರಣ್ ಪೊಲೀಸರ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆ ಎಂದು ಬೆಂಗಳೂರಿನ ದಕ್ಷಿಣ ವಿಭಾಗದ ಡಿಸಿಪಿ ರಾಹುಲ್‌ಕುಮಾರ್ ಶಹಾಪುರ್‌ವಾಡ್ ಸ್ಪಷ್ಟನೆ ನೀಡಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆತ ಕೆಲಸ ತೆಗೆದ ಬಳಿಕ ಊರು ಬಿಟ್ಟು ಹೋಗಿದ್ದ. 1 ತಿಂಗಳ ಬಳಿಕ ಬೆಂಗಳೂರಿಗೆ ಬಂದು ಪ್ರತಿಮಾರನ್ನು ಕೊಲೆಗೈದಿದ್ದಾನೆ. ಮೊದಲು ವೇಲ್‌ನಿಂದ ಬಿಗಿದು ಬಳಿಕ ಕುತ್ತಿಗೆ ಕೊಯ್ದು ಕೊಲೆಗೈದಿದ್ದಾನೆ. ಮಲೆಮಹದೇಶ್ವರ ಬೆಟ್ಟದಲ್ಲಿ ಆರೋಪಿ ಕಿರಣ್‌ನನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ.
ತನಿಖೆ ಕೈಗೊಂಡಾಗ ಕಾರು ಚಾಲಕ ಕಿರಣ್ ಬಗ್ಗೆ ಅನುಮಾನ ಬಂದಿತ್ತು. 2 ತಿಂಗಳ ಹಿಂದೆ ಕಿರಣ್‌ನನ್ನು ಕೆಲಸದಿಂದ ಪ್ರತಿಮಾ ತೆಗೆದು ಹಾಕಿದ್ದರು. ಕೆಲಸದಿಂದ ತೆಗೆದುಹಾಕಿದ ಬಳಿಕ ಕಿರಣ್ಗೆ ಸಂಪಾದನೆ ಇಲ್ಲವೆಂದು ಪತ್ನಿಯೂ ಮನೆ ಬಿಟ್ಟು ಹೋಗಿದ್ದಳು. ಮಾಹಿತಿ ಬಂದ ತಕ್ಷಣ ಎಸಿಪಿ, ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ತೆರಳಿ ಕಾರ್ಯಚರಣೆ ಮಾಡಲಾಗಿದೆ ಎಂದು ಹೇಳಿದ್ದಾರೆ.