ಪುನೀತ್ ರಾಜ್‍ಕುಮಾರ್ ಅವರ ದೊಡ್ಡ ಅಭಿಮಾನಿಗಳಲ್ಲಿ ಒಬ್ಬರು ಸ್ವತಃ ಅವರ ಅಣ್ಣ ರಾಘವೇಂದ್ರ ರಾಜ್‍ಕುಮಾರ್. ಇಷ್ಟು ದಿನ ಎದೆಯ ಒಳಗೆ ಇಟ್ಟುಕೊಂಡಿದ್ದ ಅಪ್ಪುವಿನ ಹೆಸರನ್ನು ಈಗ ಎದೆಯ ಮೇಲೆ ಹಚ್ಚೆಯಾಗಿ ಹಾಕಿಸಿಕೊಂಡಿದ್ದಾರೆ. ಪುನೀತ್ ರಾಜ್‍ಕುಮಾರ್ ಅಗಲಿ ಒಂದು ವರ್ಷಕ್ಕೂ ಹೆಚ್ಚು ಸಮಯವಾಗಿದ್ದರೂ ಅವರ ಅಗಲಿಕೆಯನ್ನು ಇಂದಿಗೂ ಎಷ್ಟೋ ಜನರಿಗೆ ಅರಗಿಸಿಕೊಳ್ಳಲಾಗಿಲ್ಲ. ಪುನೀತ್ ಅಗಲಿಕೆ ಬಳಿಕ ರಾಜ್ಯದಾದ್ಯಂತ ಬೀದಿ ಬೀದಿಯಲ್ಲಿ ಅವರ ಕಟೌಟ್‍ಗಳು ಇನ್ನೂ ರಾರಾಜಿಸಿವೆ. ಪುತ್ಥಳಿಗಳ ಉದ್ಘಾಟನೆ, ಕೆಲವರಂತೂ ದೇವಾಲಯವನ್ನೇ ಕಟ್ಟಿಬಿಟ್ಟಿದ್ದಾರೆ. ಪುನೀತ್ ಅವರ ನೆನಪನ್ನು ತ್ಯಜಿಸಿ ಬಾಳುವುದು ಅವರ ಕೋಟ್ಯಂತರ ಅಭಿಮಾನಿಗಳಿಗೆ ಸಾಧ್ಯವಾಗುತ್ತಿಲ್ಲ. ಅಂಥಹವರಲ್ಲಿ ಪುನೀತ್ ರಾಜ್‍ಕುಮಾರ್ ಅವರ ಅಣ್ಣ ರಾಘವೇಂದ್ರ ರಾಜ್‍ಕುಮಾರ್ ಸಹ ಒಬ್ಬರು.
ದೊಡ್ಡ ಅಪ್ಪು ಅಭಿಮಾನಿ ಆಗಿರುವ ರಾಘವೇಂದ್ರ ರಾಜ್‍ಕುಮಾರ್, ಪ್ರತಿದಿನವೂ ಅಪ್ಪುವಿನ ಭಾವಚಿತ್ರವನ್ನು ತನ್ನ ಶರ್ಟ್‍ಗೆ ಸಿಕ್ಕಿಸಿಕೊಂಡು ಓಡಾಡುತ್ತಿದ್ದರು. ಯಾವುದೇ ಕಾರ್ಯಕ್ರಮಕ್ಕೆ ಹೋದರು ಎದೆಯ ಮೇಲೆ ಅಪ್ಪು ಚಿತ್ರವೊಂದು ಇದ್ದೇ ಇರುತ್ತಿತ್ತು. ಆದರೆ ಈಗ ರಾಘವೇಂದ್ರ ರಾಜ್ಕುಮಾರ್ ಅವರು ತಮ್ಮ ಈ ವಯಸ್ಸಿನಲ್ಲಿ, ಆರೋಗ್ಯ ಸಮಸ್ಯೆಗಳ ನಡುವೆ ಸಹೋದರ ಪುನೀತ್ ರಾಜ್‍ಕುಮಾರ್ ಹಾಗೂ ಅವರ ಮಕ್ಕಳ ಹೆಸರನ್ನು ಎದೆಯ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದಾರೆ. ಅಪ್ಪು, ಟೊಟೊ ಮತ್ತು ನುಕ್ಕಿ ಎಂದು ಮೂರು ಹೆಸರುಗಳನ್ನು ರಾಘವೇಂದ್ರ ರಾಜ್ಕುಮಾರ್ ತಮ್ಮ ಎದೆಯ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದಾರೆ. ಹೆಸರುಗಳನ್ನು ಹಚ್ಚೆ ಹಾಕಿಸಿಕೊಂಡಿರುವ ರಾಘವೇಂದ್ರ ರಾಜ್ಕುಮಾರ್ ಅವರ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.