ಧಾರವಾಡ : ಆರೋಗ್ಯ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದ್ದು, ಶೀಘ್ರವೇ 800 ಜನ ಸಿಬ್ಬಂದಿ ನೇಮಕ ಮಾಡಿಕೊಳ್ಳಲಿದ್ದೇವೆ ಎಂದು ಆರೋಗ್ಯ ಸಚಿವ ದಿನೇಶ ಗುಂಡೂರಾವ್ ಹೇಳಿದರು.
ಧಾರವಾಡದಲ್ಲಿ ಮಾತನಾಡಿದ ಅವರು, ಇಡೀ ರಾಜ್ಯದ ತುಂಬ ಸಿಬ್ಬಂದಿ ನೇಮಕವಾಗಲಿದ್ದಾರೆ. ತಾಲೂಕಾ ಆಸ್ಪತ್ರೆಗಳಿಗೆ ವೈದ್ಯರು ಬೇಕಾಗಿದ್ದಾರೆ. ಅವರನ್ನೂ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲು ಅನುಮತಿ ಕೊಡಲಾಗಿದೆ. ಎಂಬಿಬಿಎಸ್ ಹಾಗೂ ಎಂಡಿ ಮಾಡಿದ ವೈದ್ಯರ ಖಾಲಿ ಹುದ್ದೆಗಳು ಕೂಡ ಭರ್ತಿ ಆಗಲಿವೆ. ತಲಾ 1500 ಎಂಬಿಬಿಎಸ್ ಮತ್ತು ಸ್ಪೆಷಲಿಸ್ಟ್ ಹುದ್ದೆ ಖಾಲಿ ಇವೆ. ಅವುಗಳ ಭರ್ತಿ ಪ್ರಕ್ರಿಯೆ ಈಗ ನಡೆದಿದೆ ಎಂದರು.
ಲ್ಯಾಬ್ ಟೆಕ್ನಿಷಿಯನ್ ಸೇರಿದಂತೆ ಗ್ರೂಪ್ ಡಿ ಹುದ್ದೆಗಳ ನೇಮಕಾತಿಗೂ ಒತ್ತು ಕೊಡಲಾಗುವುದು. ಕೆಲ ತಾಂತ್ರಿಕ ಸಮಸ್ಯೆಗಳಿಂದ ಗುತ್ತಿಗೆ ನೌಕರರ ಕೆಲ ತಿಂಗಳ ಸಂಬಳ ಬಾಕಿ ಇದೆ. ಇದನ್ನು ಪರಿಶೀಲಿಸಿ ಸಂಬಳ ಬಿಡುಗಡೆ ಮಾಡಲಾಗುವುದು ಎಂದು ಸಚಿವರು ತಿಳಿಸಿದರು.