ಬೆಂಗಳೂರು: ಕಾವೇರಿ ನೀರು ಹಂಚಿಕೆ ವಿವಾದದ ಕುರಿತು ಮಾಜಿ ಸಚಿವ ಗೋವಿಂದ ಕಾರಜೋಳ ಪ್ರತಿಕ್ರಿಯೆ ನೀಡಿದ್ದಾರೆ. ಸ್ಟಾಲಿನ್ ಸ್ನೇಹಕ್ಕಾಗಿ ನೀರು ಹರಿಸಿ ರಾಜ್ಯದ ಜನತೆಗೆ ದ್ರೋಹ ಮಾಡುತ್ತಿದ್ದಾರೆ ಎಂದಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಮಂಗಳವಾರ ಬಂದ್ ಶಾಂತಿಯುತವಾಗಿ ಆಚರಿಸಲಾಗಿದೆ. ಸಂಕಷ್ಟದ ಸಂದರ್ಭದಲ್ಲಿ ಸರ್ಕಾರ ನೀರು ಬಿಡ್ತಿದೆ. ಸರ್ಕಾರ ಪರಿಸ್ಥಿತಿ ನಿಭಾಯಿಸುವಲ್ಲಿ ವಿಫಲವಾಗಿದೆ. ಸ್ಟಾಲಿನ್ ಸ್ನೇಹಕ್ಕಾಗಿ ನೀರು ಹರಿಸಿ ರಾಜ್ಯದ ಜನತೆಗೆ ದ್ರೋಹ ಮಾಡುತ್ತಿದ್ದಾರೆ ಎಂದರು.
ತಮಿಳುನಾಡಿಗೆ 32 ಟಿಎಂಸಿ ಅಡಿ ನೀರು ಮಾತ್ರ 1.8 ಲಕ್ಷ ಹೆಕ್ಟೇರ್ ಬೆಳೆಗೆ ಹಂಚಿಕೆ ಆಗಿರೋದು. ಆದರೆ ಅವರು 4 ಲಕ್ಷ ಹೆಕ್ಟೇರ್ ಕುರುವೈ ಬೆಳೆ ಬೆಳೆದಿದ್ದಾರೆ. ಈಗಾಗಲೇ ಅಧಿಕ ನೀರು ಹರಿದು ಹೋಗಿದೆ. ಇದನ್ನು ನಮ್ಮವರು ಮನವರಿಕೆ ಮಾಡಿಕೊಡುವಲ್ಲಿ ವಿಫಲವಾಗಿದ್ದಾರೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಕಡಿಮೆ ಮಳೆ ಆಗಿದೆ. ಬಿದ್ದ ಮಳೆ ಎಲ್ಲಕೆ ಆರೆಸ್ ಜಲಾಶಯಕ್ಕೇ ಹರಿದು ಬರಲ್ಲ ಎಂದು ಹೇಳಿದರು.
ಮಳೆ ಆಧಾರದಲ್ಲಿ ನೀರು ಹಂಚಿಕೆ ಮಾಡಿರೋದು ತಪ್ಪು ಅಂತ ಕೋರ್ಟ್‍ಗೆ ಮನವರಿಕೆ ಮಾಡಿ ಕೊಟ್ಟಿಲ್ಲ. ಇವರ ಪಾರ್ಟ್‍ನರ್ ಸ್ಟಾಲಿನ್ ಸರ್ಕಾರಕ್ಕೆ ಅನುಕೂಲ ಮಾಡಿಕೊಡಲು ನೀರು ಬಿಡುತ್ತಿದ್ದಾರೆ. ಅಕ್ಕಿ ಮೇಲೆ ಆಸೆ ನೆಂಟರ ಮೇಲೆ ಪ್ರೀತಿ ಅನ್ನೋ ನಡೆ ತೋರಿಸ್ತಿದೆ ಸರ್ಕಾರ. 3 ಸಾವಿರ ಕ್ಯೂಸೆಕ್ಸ್ ಅಲ್ಲ ಒಂದು ಹನಿಯನ್ನೂ ನೀರು ಬಿಡಬಾರದು. ಮೇಕೆದಾಟು ಪಾದಯಾತ್ರೆ ಮಾಡಿದವರು ಕಾಂಗ್ರೆಸ್‍ನವರು. ಮೇಕೆದಾಟು ಯೋಜನೆ ನಾವು ಅಧಿಕಾರಕ್ಕೆ ಬಂದು ಮಾಡ್ತೇವೆ ಅಂದಿದ್ರು ಡಿಕೆಶಿ, ಯಾರ ನೆರವೂ ಬೇಕಿಲ್ಲ ಅಂದಿದ್ರು. ಈಗ ಅವರದ್ದೇ ಸರ್ಕಾರ ಇದೆ ಮೇಕೆದಾಟು ಯೋಜನೆ ಮಾಡಲಿ. ಇವತ್ತು ಬಿಜೆಪಿಯಿಂದ ಪ್ರತಿಭಟನೆ ನಡೆಸ್ತಿದ್ದೇವೆ, ಆಗಿರುವ ಅನ್ಯಾಯವನ್ನು ಜನತೆಗೆ ತಿಳಿಸ್ತೇವೆ ಎಂದು ತಿಳಿಸಿದರು.