ಧಾರವಾಡ : ಶಕ್ತಿ ಯೋಜನೆಯ ಬಿಸಿ ರಾಜ್ಯದ ವಿವಿಧ ಭಾಗದ ವಿದ್ಯಾರ್ಥಿಗಳಿಗೂ ತಟ್ಟುತಿದ್ದು, ಧಾರವಾಡದ ವಿದ್ಯಾರ್ಥಿಗಳಿಗೂ ಇದರ ಬಿಸಿ ಈಗ ತಟ್ಟಿದೆ. ನಿಗದಿತ ಸಮಯಕ್ಕೆ ಬಸ್ ಬಾರದೇ ಇರುವುದರಿಂದ ಕಂಗಾಲಾದ ವಿದ್ಯಾರ್ಥಿಗಳು ಏಕಾಏಕಿ ಬಸ್‌ಗಳನ್ನು ತಡೆದು ಇಂದು ಉಪ್ಪಿನ ಬೆಟಗೇರಿ ಗ್ರಾಮದಲ್ಲಿ ಪ್ರತಿಭಟನೆ ನಡೆಸಿದರು.
ಗ್ರಾಮದ ಮುಖ್ಯ ಬಸ್ಸ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾದು ಕಾದು ಸುಸ್ತಾಗಿದ್ದ ವಿದ್ಯಾರ್ಥಿಗಳು ಒಟ್ಟಿಗೆ ಸೇರಿ ಪ್ರತಿಭಟನೆ ನಡೆಸಿ, ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮಕ್ಕೆ ಈ ಮೊದಲು ಮೂರ್ನಾಲ್ಕು ಬಸ್‌ಗಳು ನಿರಂತರವಾಗಿ ಸಂಚರಿಸುತ್ತಿದ್ದವು. ಆದರೆ, ಈಗ ಬೆಳಿಗ್ಗೆ 8 ಗಂಟೆಯ ಬಸ್ ಧಾರವಾಡದತ್ತ ಹೊರಟು ಹೋದರೆ, ಮುಂದೆ 10 ಗಂಟೆಯವರೆಗೂ ಯಾವುದೇ ಬಸ್ಸಿನ ಸೌಕರ್ಯವಿಲ್ಲ. ಹೀಗಾಗಿ ವಿದ್ಯಾರ್ಥಿ, ವಿದ್ಯಾರ್ಥಿನಿಯರು ನಿಗದಿತ ಸಮಯಕ್ಕೆ ಕಾಲೇಜಿಗೆ ಹೋಗಲು ಆಗುತ್ತಿಲ್ಲ ಎಂದು ವಿದ್ಯಾರ್ಥಿ, ವಿದ್ಯಾರ್ಥಿನಿಯರು ತಮ್ಮ ಅಳಲು ತೊಡಿಕೊಂಡರು.
ಬೆಳಿಗ್ಗೆ 9 ಗಂಟೆ ಹಾಗೂ 10 ಗಂಟೆಗೆ ಎರಡು ಬಸ್ಸಿನ ಅವಶ್ಯಕತೆ ಇದ್ದು, ಒಂದು ಬಸ್ಸನ್ನು ಹೆಚ್ಚುವರಿಯಾಗಿ 9 ಗಂಟೆಗೆ ಬೀಡಲು ಆಗ್ರಹಿಸಿದರು. ಈ ಎರಡು ಬಸ್ಸುಗಳು ಬಂದರೆ ವಿದ್ಯಾರ್ಥಿಗಳು ನಿಗದಿತ ಸಮಯಕ್ಕೆ ಕಾಲೇಜಿಗೆ ಹೋಗಲು ಅನುಕೂಲವಾಗುತ್ತದೆ.
ಈ ಸಂಬಂಧ ಡಿಪೊ ಮ್ಯಾನೇಜರ್‌ಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ವಿದ್ಯಾರ್ಥಿಗಳು ಆಕ್ರೋಶ ಹೊರಹಾಕಿದರು. ಸ್ಥಳಕ್ಕೆ ಪೊಲೀಸರು ಕೂಡ ದೌಡಾಯಿಸಿ ಕಂಟ್ರೋಲರ್ ಅವರೊಂದಿಗೆ ಮಾತುಕತೆ ನಡೆಸಿದರು. ಸ್ಥಳಕ್ಕೆ ಡಿಪೊ ಮ್ಯಾನೇಜರ್ ಬಂದು ನಮಗೆ ಬಸ್ ಬಿಡುವುದಾಗಿ ಲಿಖಿತ ರೂಪದಲ್ಲಿ ಭರವಸೆ ಕೊಡಬೇಕು ಎಂದು ಪಟ್ಟು ಹಿಡಿದರು. ಮಧ್ಯ ಪ್ರವೇಶ ಮಾಡಿದ ಗ್ರಾಮ ಪ್ರಮುಖರು, ಮಕ್ಕಳ ಪೋಷಕರು ಪೊಲೀಸರೊಂದಿಗೆ ಸೇರಿ ವಿದ್ಯಾರ್ಥಿಗಳ ಮನವೊಲಿಸಲಿಸಿದ್ದು, ಸದ್ಯ ವಿದ್ಯಾರ್ಥಿಗಳು ಪ್ರತಿಭಟನೆ ಕೈಬಿಟ್ಟಿದ್ದಾರೆ.