ರಾಮನಗರ : ಮುಖ್ಯೋಪಾಧ್ಯಾಯ ಮತ್ತು ಸಹ ಶಿಕ್ಷಕ ಮೂರನೇ ತರಗತಿ ವಿದ್ಯಾರ್ಥಿನಿ ಕೈಗೆ ಆ್ಯಸಿಡ್ ಕೊಟ್ಟು ಶಾಲೆಯ ಶೌಚಾಲಯ ಕ್ಲೀನ್ ಮಾಡಿಸಿರುವ ಘಟನೆ ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ತೂಬಿನಕೆರೆ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.
ಶಾಲೆಯ ಮುಖ್ಯೋಪಾಧ್ಯಾಯರಿಂದ ಬೇಜವಾಬ್ದಾರಿ ತನದಿಂದ ವಿದ್ಯಾರ್ಥಿನಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾಳೆ. ಶಾಲೆಯ ಶೌಚಾಲಯ ಕ್ಲೀನ್ ಮಾಡಿ ಉಸಿರಾಟದ ಸಮಸ್ಯೆಯಿಂದ ವಿದ್ಯಾರ್ಥಿನಿ ಅಸ್ವಸ್ಥಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾಗಡಿ ತಾಲೂಕಿನ ತೂಬಿನಕೆರೆ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ಹೇಮಲತಾ (9) ಮೂರನೇ ತರಗತಿ ಓದುತ್ತಿದ್ದಾಳೆ. ಬ್ಲೀಚಿಂಗ್ ಪೌಡರ್, ಆ್ಯಸಿಡ್ ಕೊಟ್ಟು ಶೌಚಾಲಯ ಕ್ಲೀನ್ ಮಾಡುವಂತೆ ಹೇಮಲತಾಳಿಗೆ ಮುಖ್ಯೋಪಾಧ್ಯಾಯ ಸಿದ್ದಲಿಂಗಯ್ಯ ಗುರು, ಸಹ ಶಿಕ್ಷಕ ಬಸವರಾಜು ತಾಕೀತು ಮಾಡಿದ್ದಾರೆ.
ಶಿಕ್ಷಕರು ಹೇಳಿದಂತೆ ಹೇಮಲತಾ ಶೌಚಾಲಯ ಕ್ಲೀನ್ ಮಾಡಿದ್ದಾಳೆ. ಕ್ಲೀನ್ ಮಾಡಿ ವಿದ್ಯಾರ್ಥಿನಿ ಹೇಮಲತಾ ಮನೆಗೆ ಬಂದ್ದಿದ್ದು, ಕೆಲ ಸಮಯದ ನಂತರ ಅಸ್ವಸ್ಥಗೊಂಡಿದ್ದಾಳೆ. ತಕ್ಷಣವೇ ಪೋಷಕರು ಮಾಗಡಿ ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ಬಳಿಕ ಹೇಮಲತಾಳನ್ನು ವಿಚಾರಿಸಿದಾಗ ಶೌಚಾಲಯ ಕ್ಲೀನ್ ಮಾಡಿಸಿದ ಬಗ್ಗೆ ಹೇಳಿದ್ದಾಳೆ. ಅಲ್ಲದೆ ಆ್ಯಸಿಡ್ ವಾಸನೆಗೆ ಅಸ್ವಸ್ಥಗೊಂಡಿರುವುದಾಗಿ ತಿಳಿಸಿದ್ದಾಳೆ. ಈ ಹಿನ್ನೆಲೆಯಲ್ಲಿ ಶಿಕ್ಷಕರಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಅವರನ್ನು ಅಮಾನತುಗೊಳಿಸುವಂತೆ ಪೋಷಕರು ಆಗ್ರಹಿಸಿದ್ದಾರೆ.