ಬೆಂಗಳೂರು : ಮನೆ ಮುಂದೆ, ರಸ್ತೆ ಬದಿ ಬೈಕ್ ನಿಲ್ಲಿಸಿರೋದು ಇರಲಿ, ಇನ್ನು ಮನೆಯ ಗೇಟ್ ಒಳಗೆ ಬೈಕ್ ನಿಲ್ಲಿಸಿ ಗೇಟಿಗೆ ಭದ್ರವಾಗಿ ಬೀಗ ಹಾಕಿ ನಿಶ್ಚಿಂತೆಯಾಗಿ ಮಲಗುತ್ತಿದ್ದವರಿಗೂ ಚಿಂತೆ ಶುರುವಾಗಿದೆ.
ಹೌದು ಮನೆಯ ಗೇಟ್ ಒಳಗಡೆ ಬೈಕ್ ಇಟ್ಟು ಬೀಗ ಹಾಕಿ ಮಲಗಿದರೂ ಸಹ ಕ್ಷಣಾರ್ಧದಲ್ಲಿ ಬೈಕುಗಳನ್ನು ಕಳ್ಳತನ ಮಾಡುವ ಚಾಲಾಕಿ ಕಳ್ಳರು ಹೆಚ್ಚಾಗುತ್ತಿದ್ದಾರೆ. ಬೆಂಗಳೂರಿನ ಸಂಜಯನಗರದ ರಾಮಕೃಷ್ಣಪ್ಪ ಲೇಔಟ್‌ನಲ್ಲಿ ಮನೆಯ ಪಾರ್ಕಿಂಗಿನಲ್ಲಿ ನಿಲ್ಲಿಸಲಾಗಿದ್ದ ಬೈಕ್‌ಗಳನ್ನು ಕದ್ದು ಪರಾರಿಯಾಗಿದ್ದಾರೆ.
ಮನೆಯ ಗೇಟ್ ಒಳಭಾಗದಲ್ಲಿ ಬೈಕ್ ನಿಲ್ಲಿಸಿ ಗೇಟಿಗೆ ಬೀಗ ಹಾಕಿ ನೆಮ್ಮದಿಯಿಂದ ಮಲಗಿದ್ದ ಬೈಕ್ ಮಾಲೀಕರು ಬೆಳಗ್ಗೆ ಎದ್ದು ನೋಡುತ್ತಿದ್ದಂತೆ ಬೈಕ್ ಇಲ್ಲದಿರುವುದನ್ನು ಕಂಡು ಶಾಕ್ ಆಗಿದ್ದಾರೆ. ತಕ್ಷಣ ಮನೆಗೆ ಅಳವಡಿಸಿದ್ದ ಸಿಸಿ ಕ್ಯಾಮರಾ ಚೆಕ್ ಮಾಡಿದ್ದು, ಕಳ್ಳರ ಕೈಚಳಕ ಬೆಳಕಿಗೆ ಬಂದಿದೆ. ಈ ಸಂಬಂಧ ಸಂಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.