ಬೆಂಗಳೂರು : ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮ ಇದೇ 22ರಂದು ನಡೆಯಲಿದೆ. ಆ ದಿನ ಅಶಾಂತಿ, ಅಡ್ಡಿ ಆತಂಕ, ಅಹಿತಕರ ಘಟನೆ ಉಂಟಾಗದಂತೆ ರಾಜ್ಯ ಸರಕಾರ ಮುನ್ನೆಚ್ಚರಿಕೆ ವಹಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಆಗ್ರಹಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 22ರಂದು ಸರಕಾರಿ ರಜೆ ಘೋಷಿಸಲು ಮನವಿ ಮಾಡಿದರು. ಪಿವಿಆರ್ ಚಿತ್ರಮಂದಿರಗಳಲ್ಲಿ ನೇರ ಪ್ರಸಾರ ಇರಲಿದೆ. ಜನರು ಉತ್ತರಾಭಿಮುಖವಾಗಿ 5 ದೀಪ ಬೆಳಗಿಸಲು ವಿನಂತಿಸಿದರು.
ಜನವರಿ 22ರಂದು ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮಚಂದ್ರನ ಪ್ರಾಣ ಪ್ರತಿಷ್ಠಾಪನೆಯ ಐತಿಹಾಸಿಕ ಘಳಿಗೆಗೆ ರಾಮಭಕ್ತರಷ್ಟೇ ಅಲ್ಲ; ಇಡೀ ಜಗತ್ತಿನ ಅನೇಕ ದೇಶಗಳಲ್ಲಿ ಕೂಡ ಉತ್ಸಾಹ ಕಾಣುತ್ತಿದೆ. ಪ್ರಭು ಶ್ರೀರಾಮಚಂದ್ರ ಮತ್ತು ಕರ್ನಾಟಕದ ಸಂಬಂಧ ನಿನ್ನೆ ಮೊನ್ನೆಯದಲ್ಲ. ರಾಮಾಯಣ ಯುಗದಿಂದ ಈ ಸಂಬಂಧ ಇದೆ. ಸೀತಾಮಾತೆಯ ಅಪಹರಣದ ನಂತರ ಶ್ರೀರಾಮನು ಲಕ್ಷ್ಮಣನ ಜೊತೆ ಕಿಷ್ಕಿಂಧೆಗೆ (ಇಂದಿನ ಹಂಪಿ) ಪ್ರಯಾಣ ಬೆಳೆಸಿದ ಕುರುಹುಗಳಿವೆ. ಕೊಪ್ಪಳದ ಅಂಜನಾದ್ರಿ ಬೆಟ್ಟ ಹನುಮಂತನ ಜನ್ಮಭೂಮಿ ಎಂದು ವಿವರಿಸಿದರು.
ಬಿ.ಕೆ.ಹರಿಪ್ರಸಾದ್ ಕಾಂಗ್ರೆಸ್ ಟಾರ್ಗೆಟ್?
ಕಾಂಗ್ರೆಸ್ಸಿನ ಬಿ.ಕೆ.ಹರಿಪ್ರಸಾದ್ ಸಾಮಾನ್ಯ ವ್ಯಕ್ತಿ ಅಲ್ಲ. ಅವರೂ ಹೇಳಿಕೆ ಕೊಟ್ಟಿದ್ದಾರೆ. ಆದ್ದರಿಂದ ಅಹಿತಕರ ಘಟನೆ ಆಗದಂತೆ ರಾಜ್ಯ ಸರಕಾರ ಮುನ್ನೆಚ್ಚರಿಕೆ ವಹಿಸಲಿ ಎಂದು ಅವರು ಪ್ರಶ್ನೆಗೆ ಉತ್ತರವಾಗಿ ಒತ್ತಾಯಿಸಿದರು. ಬಿ.ಕೆ.ಹರಿಪ್ರಸಾದ್ ಅವರನ್ನು ಕಾಂಗ್ರೆಸ್ ಟಾರ್ಗೆಟ್ ಮಾಡಿದೆಯೇ ಅಥವಾ ಕೇಂದ್ರ ಸರಕಾರವೇ ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ ಎಂದು ನುಡಿದರು.
ಶ್ರೀರಾಮನು ವಾನರ ಸೇನೆಯನ್ನು ಒಗ್ಗೂಡಿಸಿದ್ದು ಕೂಡ ಕರ್ನಾಟಕದಲ್ಲೇ ಎಂದು ಉಲ್ಲೇಖಿಸಿದರು. ತೊರವೆ ರಾಮಾಯಣ ಮೇರುಕೃತಿ ಎಂದ ಅವರು, ನರೇಂದ್ರ ಮೋದಿಜೀ ಅವರ ನೇತೃತ್ವದಲ್ಲಿ ಭಾರತದ ಸಂಸ್ಕøತಿಯ ಪುನರುಜ್ಜೀವನ ಆಗುತ್ತಿದೆ. ಇದು ರಾಮಭಕ್ತರು, ಹಿಂದೂಗಳಲ್ಲಿ ಸಂತಸಕ್ಕೆ ಕಾರಣವಾಗಿದೆ ಎಂದು ತಿಳಿಸಿದರು.
ಕಾಶಿ ವಿಶ್ವನಾಥ ಕಾರಿಡಾರ್ ಅಭಿವೃದ್ಧಿ ಆಗುತ್ತಿದೆ. ಉಜ್ಜೈನಿ ಅಭಿವೃದ್ಧಿ, ನಮೋ ಗಂಗೆ ಕಾರ್ಯಕ್ರಮಗಳು ಪ್ರಾಚೀನ ಪರಂಪರೆಯ ಪುನರುಜ್ಜೀವನಕ್ಕೆ ಸಾಕ್ಷಿ. ನರೇಂದ್ರ ಮೋದಿಜೀ ಅವರ ದೂರದೃಷ್ಟಿ ಇದಕ್ಕೆ ಕಾರಣ ಎಂದು ವಿಶ್ಲೇಷಿಸಿದರು. ಕಾಂಗ್ರೆಸ್ ಸರಕಾರ ಗೊಂದಲ, ದ್ವಂದ್ವ ನಿಲುವಿನಲ್ಲಿದೆ. ರಾಜ್ಯ ಸರಕಾರವು ಕರಸೇವಕ ಶ್ರೀಕಾಂತ ಪೂಜಾರಿಯನ್ನು ದುರುದ್ದೇಶದಿಂದ ಬಂಧಿಸಿತ್ತು. ದೇಶದಲ್ಲಿ ಕುಣಿದು ಕುಪ್ಪಳಿತದ ವಾತಾವರಣವನ್ನು ಕಲುಷಿತಗೊಳಿಸಲು ಈ ಬಂಧನ ನಡೆದಿತ್ತು ಎಂದು ಟೀಕಿಸಿದರು.
ಕಾಂಗ್ರೆಸ್ಸಿಗರು ಎಲ್ಲೆಡೆ ರಾಜಕೀಯ ಮಾಡುತ್ತಿದ್ದಾರೆ. ಅಯೋಧ್ಯೆ ಆಹ್ವಾನವನ್ನು ತಿರಸ್ಕರಿಸಿದ್ದಾರೆ. ಅಲ್ಪಸಂಖ್ಯಾತರಿಗೆ ದುಃಖದ ಆತಂಕ ಅವರಲ್ಲಿದೆ. ಅಲ್ಪಸಂಖ್ಯಾತರ ತುಷ್ಟೀಕರಣ ಮತ್ತು ರಾಮಭಕ್ತರ ಕುರಿತ ತಿರಸ್ಕಾರದ ನಡವಳಿಕೆ ಸಾಕಷ್ಟು ಟೀಕೆಗೆ ಒಳಗಾಗಿದೆ ಎಂದು ವಿವರಿಸಿದರು.
ಅತಿಹೆಚ್ಚು ಕರಸೇವಕರು ಕರ್ನಾಟಕದಿಂದ ಹೋಗಿದ್ದರು. ಯಡಿಯೂರಪ್ಪ, ರಾಮಚಂದ್ರಗೌಡ ಸೇರಿ ಅನೇಕ ಹಿರಿಯರು ಭಾಗವಹಿಸಿದ್ದರು. ರಾಮಮಂದಿರದಉಸ್ತುವಾರಿಯನ್ನು ಕನ್ನಡಿಗರೇ ನೋಡಿಕೊಳ್ಳುತ್ತಿದ್ದಾರೆ. ಶಿಲ್ಪಿ ಮೈಸೂರಿನ ಅರುಣ್ ಯೋಗಿರಾಜ್ ಎಂಬುದು ಕನ್ನಡಿಗರಿಗೆ ಹೆಮ್ಮೆಯ ವಿಚಾರ. ಅವರ ಜೊತೆ ಕರ್ನಾಟಕದ 6 ಶಿಲ್ಪಿಗಳು ಭಾಗವಹಿಸಿದ್ದರು. ಕರ್ನಾಟಕದ ಪೇಜಾವರ ಶ್ರೀಗಳು ಟ್ರಸ್ಟಿ ಎಂದು ಹೆಮ್ಮೆಯಿಂದ ನುಡಿದರು.
ಕರ್ನಾಟಕದ ಶ್ರೀಗಂಧದ ಮರ, ಶ್ರೀಗಂಧದ ಎಣ್ಣೆ ಬಳಸುತ್ತಿದ್ದಾರೆ. ಅಯೋಧ್ಯೆಯಲ್ಲಿ ವಿನಾಯಕನನ್ನು ಅರಳಿಸಿದ ಉತ್ತರ ಕನ್ನಡ ಜಿಲ್ಲೆಯ ಕೆಕ್ಕೆರಿನ ಶಿಲ್ಪಿ ವಿನಾಯಕ ಗೌಡ. ಕರ್ನಾಟಕದ ಸಾದರಹಳ್ಳಿಯಿಂದ 800 ಟನ್ ಶಿಲೆಯನ್ನು ರಾಮಮಂದಿರ ನಿರ್ಮಾಣದಲ್ಲಿ ಬಳಸಲಾಗಿದೆ. ಜನವರಿ 19 ರಿಂದ 48 ದಿನಗಳ ಕಾಲ ಅಯೋಧ್ಯೆಯಲ್ಲಿ ರಾಮನಗರದ ವಿಜಯಕುಮಾರ್ ಮತ್ತು 10 ಕಲಾವಿದರಿಂದ ಮಂಗಳವಾದ್ಯ ಸೇವೆ.
ಕರ್ನಾಟಕದ ಹನುಮಾನ್ ಗ್ರಾನೈಟ್ಸ್ ರಾಮಮಂದಿರದ ಸಂಪೂರ್ಣ ಶಿಲೆಗಳನ್ನು ಪೂರೈಸಿದೆ. ಕರ್ನಾಟಕದ ರಾಜೇಶ್ ಶೆಟ್ಟಿ ಅವರ ಕಂಪೆನಿಯ ರಾಮಮಂದಿರದ ಸಂಪೂರ್ಣ ವಿದ್ಯುತ್ ಸಂಪರ್ಕದ ಕಾರ್ಯ ಪೂರೈಸುತ್ತಿದೆ. ಧಾರವಾಡದಿಂದ ರಾಮನಿಗಾಗಿ ಎರಡು ವಿಶೇಷ ಕಂಬಳಿಯನ್ನು ಕಳಿಸಲಾಗಿದೆ. ರಾಮಮಂದಿರದ ದ್ವಾರವನ್ನು ಕೆತ್ತಿರುವುದು ಕೊಪ್ಪಳದ ರಾಮಮೂರ್ತಿ ಸ್ವಾಮಿ ಎಂದರು. ಅಯೋಧ್ಯೆ ರೈಲು ನಿಲ್ದಾಣಕ್ಕೆ ವಿದ್ಯುತ್ ವ್ಯವಸ್ಥೆ ಮಾಡಿದ್ದು ಕರ್ನಾಟಕದ ಮೂಡಬಿದರೆಯ ಶ್ರೀ ರೋನಾಲ್ಡ್ ಸಿಲ್ಟನ್ ಡಿಸೋಜಾ ಮಾಲಿಕತ್ವದ ಲೆಕ್ಸಾ ಲೈಟಿಂಗ್ ಕಂಪೆನಿ ಎಂದು ತಿಳಿಸಿದರು.
ಜನವರಿ 22ರ ನಂತರ ಕರ್ನಾಟಕದ ರಾಮಭಕ್ತರು ಅಯೋಧ್ಯೆಗೆ ಭೇಟಿ ನೀಡಲಿದ್ದಾರೆ. ರಾಜ್ಯದಿಂದ 35 ಸಾವಿರ ರಾಮಭಕ್ತರು ಜನವರಿ 31 ರಿಂದ ಮಾರ್ಚ್ 25ರ ವರೆಗೆ ಸುಮಾರು 25 ರೈಲುಗಳಲ್ಲಿ ಅಯೋಧ್ಯೆಗೆ ತಲುಪುತ್ತಾರೆ. ಇದರ ವೆಚ್ಚವನ್ನು ಸ್ವಂತವಾಗಿ ಭರಿಸುತ್ತಾರೆ. ಈ ಅಭಿಯಾನದ ಸಂಚಾಲಕರಾಗಿ ಬಿಜೆಪಿ ಮಾಜಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಮಾಜಿ ಸದಸ್ಯ ಸಿದ್ದರಾಜು, ಸಹ-ಸಂಚಾಲಕರಾಗಿ ಮಾಜಿ ರಾಜ್ಯ ಕಾರ್ಯದರ್ಶಿ ಜಗದೀಶ್ ಹಿರೇಮನಿ ಅವರನ್ನು ನೇಮಿಸಲಾಗಿದೆ ಎಂದು ತಿಳಿಸಿದರು.
ಪ್ರತಿ ರಾಮಭಕ್ತರಿಗೆ ಕ್ಯೂ ಆರ್ ಕೋಡ್ ಹೊಂದಿರುವ ಐಡಿ ಕಾರ್ಡನ್ನು ವಿತರಿಸಲಾಗುತ್ತದೆ. ಕರ್ನಾಟಕದ ಪ್ರಮುಖ ರೈಲು ನಿಲ್ದಾಣಗಳಿಂದ ರೈಲುಗಳ ವ್ಯವಸ್ಥೆಯನ್ನು ಮಾಡಲಾಗಿದೆ. ಅಯೋಧ್ಯೆಯಲ್ಲಿ ಕನ್ನಡ ಭಾಷೆಯ ಹೆಲ್ಪ್‍ಲೈನ್ ಕೇಂದ್ರವಿದ್ದು ಕರ್ನಾಟಕದ ರಾಮಭಕ್ತರಿಗೆ ಕನ್ನಡ ಭಾಷೆಯಲ್ಲೇ ಅನೌನ್ಸ್‍ಮೆಂಟ್ ಮಾಡುವ ವ್ಯವಸ್ಥೆ ಮಾಡಲಾಗಿದೆ. ಅಯೋಧ್ಯೆಯಲ್ಲಿ ವಸತಿಗಾಗಿ ವ್ಯವಸ್ಥಿತವಾದ ಜರ್ಮನ್ ಟೆಂಟ್‍ಹೌಸ್‍ಗಳಿದ್ದು ಸ್ನಾನಗೃಹ, ಶೌಚಾಲಯ ವ್ಯವಸ್ಥೆಗಳಿರುತ್ತದೆ. ಅಯೋಧ್ಯೆಯಲ್ಲಿ 48 ಕಡೆ ಭೋಜನದ ವ್ಯವಸ್ಥೆ ಮಾಡಲಾಗಿದ್ದು ಅದರಲ್ಲಿ 2 ಕಡೆ ಕರ್ನಾಟಕದ ರಾಮಭಕ್ತರಿಗಾಗಿ ಭೋಜನದ ವ್ಯವಸ್ಥೆ ಮಾಡಲಾಗಿದೆ. ಒಂದು ರೈಲಿನಲ್ಲಿ 1500 ಜನ ಪ್ರಯಾಣ ಮಾಡುತ್ತಿದ್ದು ಪ್ರತಿ ರೈಲಿಗೆ ರೈಲ್ ಪ್ರಮುಖ್ ಮತ್ತು ಬೋಗಿ ಪ್ರಮುಖ್ ಇದ್ದು ಊಟ ಉಪಚಾರದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಲಾಗಿದೆ ಎಂದು ವಿವರಿಸಿದರು.
“ಪರಿವರ್ತನಾ ಪಥ ರಾಮಮಂದಿರ ರಥ” ಬಿಡುಗಡೆ
ಇದೇ ಸಂದರ್ಭದಲ್ಲಿ ಅವರು “ಪರಿವರ್ತನಾ ಪಥ ರಾಮಮಂದಿರ ರಥ” ಪುಸ್ತಕವನ್ನು ಬಿ.ವೈ.ವಿಜಯೇಂದ್ರ ಅವರು ಬಿಡುಗಡೆ ಮಾಡಿದರು. ಅಯೋಧ್ಯೆಯ ಪ್ರಮುಖ ಘಟನಾವಳಿಗಳನ್ನು ಇದು ಒಳಗೊಂಡಿದೆ. “ಕಮಲ ಪಥ” ತಂಡವು ಈ ಪುಸ್ತಕವನ್ನು ಸಿದ್ಧಪಡಿಸಿದೆ. ಕಮಲ ಪಥದ ಅಜಿತ್ ಶೆಟ್ಟಿ ಹೆರಂಜೆ ಅವರು ಇದ್ದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಮ್ ಗೌಡ, ರಾಮಮಂದಿರ ದರ್ಶನ ಅಭಿಯಾನದ ಸಹ ಸಂಚಾಲಕ ಮತ್ತು ಬಿಜೆಪಿ ಮಾಜಿ ರಾಜ್ಯ ಕಾರ್ಯದರ್ಶಿ ಜಗದೀಶ್ ಹಿರೇಮನಿ ಅವರು ಉಪಸ್ಥಿತರಿದ್ದರು.