ಬೆಂಗಳೂರು : ಕರ್ನಾಟಕ ಸರ್ಕಾರವು ಬಿಯರ್ ಮೇಲಿನ ಹೆಚ್ಚುವರಿ ಅಬಕಾರಿ ಸುಂಕವನ್ನು ಮತ್ತೊಮ್ಮೆ ಹೆಚ್ಚಿಸಲು ಪ್ರಸ್ತಾಪಿಸಿರುವುದಾಗಿ ವರದಿಯಾಗಿದೆ. ಒಂದು ವೇಳೆ ಇದು ನಿಜವಾದಲ್ಲಿ ಪ್ರತಿ 650 ಮಿಲಿ ಬಿಯರ್ ಬಾಟಲಿಗೆ 8-10 ರೂ. ವರೆಗೆ ದರ ಹೆಚ್ಚಾಗಲಿದೆ. ಕರ್ನಾಟಕ ಅಬಕಾರಿ (ಅಬಕಾರಿ ಸುಂಕ ಮತ್ತು ಶುಲ್ಕಗಳು) ನಿಯಮಗಳು, 1968ಕ್ಕೆ ತಿದ್ದುಪಡಿ ಮಾಡಲು ಕರಡು ಅಧಿಸೂಚನೆ ರೂಪಿಸಲಾಗಿದ್ದು, ಇದರಲ್ಲಿ ದರ ಹೆಚ್ಚಳವನ್ನು ಪ್ರಸ್ತಾಪಿಸಲಾಗಿದೆ. ದರ ಹೆಚ್ಚಳಕ್ಕೆ ಅವಕಾಶ ನೀಡುವ ಹೊಸ ನಿಯಮಗಳು ಈ ತಿಂಗಳ ಕೊನೆಯಲ್ಲಿ ಅಥವಾ ಫೆಬ್ರವರಿ ಆರಂಭದಲ್ಲಿ ಅಂತಿಮಗೊಳ್ಳುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಬಿಯರ್ ಮಾರಾಟದಲ್ಲಿ ದೊಡ್ಡ ಮಟ್ಟದ ಬೆಳವಣಿಗೆ ಕಂಡುಬಂದಿರುವುದರಿಂದ ಆ ಮೂಲದಿಂದ ಹೆಚ್ಚು ಆದಾಯ ಸಂಗ್ರಹಿಸುವ ನಿಟ್ಟಿನಲ್ಲಿ ಸರ್ಕಾರವು ಸುಂಕವನ್ನು ಹೆಚ್ಚಿಸುವತ್ತ ಮನ ಮಾಡಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮವೊಂದು ವರದಿ ಮಾಡಿದೆ. ಕರಡು ಅಧಿಸೂಚನೆಯ ಪ್ರಕಾರ, ಕರ್ನಾಟಕದಲ್ಲಿ ತಯಾರಿಸಲಾದ ಅಥವಾ ರಾಜ್ಯಕ್ಕೆ ಆಮದು ಮಾಡಿಕೊಳ್ಳುವ ಬಿಯರ್ ಬಾಟಲಿಯ ಮೇಲೆ ಹೆಚ್ಚುವರಿ ಅಬಕಾರಿ ಸುಂಕವನ್ನು ಶೇಕಡಾ 185 ರಿಂದ ಶೇಕಡಾ 195 ಕ್ಕೆ ಶೇಕಡಾ 10 ರಷ್ಟು ಹೆಚ್ಚಿಸಲಾಗುತ್ತದೆ.
ಒಂದು ವೇಳೆ ದರ ಹೆಚ್ಚಳ ಜಾರಿಗೆ ಬಂದಿದ್ದೇ ಆದಲ್ಲ, ಆರು ತಿಂಗಳ ಅವಧಿಯಲ್ಲಿ ಇದು ಎರಡನೇ ಬಾರಿ ಮದ್ಯದ ಬೆಲೆಯಲ್ಲಿ ಮಾಡಿದ ಏರಿಕೆಯಾಗಲಿದೆ. ಕಳೆದ ವರ್ಷ ಜುಲೈನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾರತೀಯ ನಿರ್ಮಿತ ಮದ್ಯದ ಮೇಲೆ ಶೇ 20ರಷ್ಟು ಮತ್ತು ಬಿಯರ್ ಮೇಲೆ ಶೇ 175ರಿಂದ ಶೇ 185ಕ್ಕೆ ಹೆಚ್ಚುವರಿ ಅಬಕಾರಿ ಸುಂಕವನ್ನು ಹೆಚ್ಚಿಸಿದ್ದರು.
ರಾಜ್ಯ ಸರಕಾರಕ್ಕೆ ಅಬಕಾರಿ ಆದಾಯವೇ ನಿರ್ಣಾಯಕ. 2023-24ನೇ ಹಣಕಾಸು ವರ್ಷದಲ್ಲಿ ಕರ್ನಾಟಕವು ಅಬಕಾರಿಯಿಂದ 36,000 ಕೋಟಿ ರೂಪಾಯಿ ಆದಾಯ ಗಳಿಸುವ ಗುರಿಯನ್ನು ಹೊಂದಿದೆ ಎಂದು ವರದಿ ಉಲ್ಲೇಖಿಸಿದೆ. ಬಡವರ ನೆಚ್ಚಿನ ಕೆಲ ಮದ್ಯದ ಬ್ರ್ಯಾಂಡ್ಗಳ ದರವನ್ನು ಕರ್ನಾಟಕ ಸರ್ಕಾರ ಹೆಚ್ಚಿಸಿದೆ ಎಂದು ಇತ್ತೀಚೆಗೆ ವರದಿಯಾಗಿತ್ತು. ಮದ್ಯ ಉತ್ಪಾದಕ ಕಂಪನಿಗಳು ಕ್ವಾಟರ್ಗೆ 20 ರಿಂದ 30 ರೂಪಾಯಿ ಏರಿಕೆ ಮಾಡಿವೆ ಎಂದು ವರದಿಯಾಗಿತ್ತು. ಆದರೆ, ನಂತರ ಸ್ಪಷ್ಟನೆ ನೀಡಿದ್ದ ಅಬಕಾರಿ ಇಲಾಖೆ, ದರ ಹೆಚ್ಚಳ ಮಾಡಿಲ್ಲ ಎಂದು ಹೇಳಿತ್ತು.
“ಮದ್ಯ ಉತ್ಪಾದಕರು ದರ ಹೆಚ್ಚಳ ಮಾಡಿದ್ದರೂ ಇರಬಹುದು. ಆದರೆ, ನಾವಂತೂ ಹೆಚ್ಚಿಸಿಲ್ಲ. ಅಬಕಾರಿ ಶುಲ್ಕ ಹೆಚ್ಚಳ ಮಾಡುವುದಾದರೆ ಮೊದಲೇ ಹೇಳುತ್ತೇವೆ. ಬಜೆಟ್ನಲ್ಲೂ ಸದ್ಯ ತೆರಿಗೆ ಹೆಚ್ಚಳದ ಬಗ್ಗೆ ಪ್ರಸ್ತಾಪ ಮಾಡಿಲ್ಲ. ಯಾವುದೇ ಟಾರ್ಗೆಟ್ ಕೂಡ ನೀಡಿಲ್ಲ” ಎಂದು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಸ್ಪಷ್ಟನೆ ನೀಡಿದ್ದರು.