State News

ಮುಂದಿನ ಪಿಎಸ್ಐ ಪರೀಕ್ಷೆ ಕೆಇಎಗೆ ವಹಿಸಲು ಚಿಂತನೆ: ಜಿ.ಪರಮೇಶ್ವರ

ಬೆಂಗಳೂರು : ಪಿಎಸ್ಐ ಮರು ಪರೀಕ್ಷೆ ಸುಗಮವಾಗಿ ನಡೆದಿದ್ದು, ಆದಷ್ಟು ಬೇಗ ಮೌಲ್ಯಮಾಪನ ಮುಗಿಸಿ ಆಯ್ಕೆ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ಹೇಳಿದರು.

ಸದಾಶಿವನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಯಾವುದೇ ರೀತಿಯ ಘಟನೆ ನಡೆದಿಲ್ಲ. ಬ್ಲೂಟೂತ್ ಎಲೆಕ್ಟ್ರಾನಿಕ್ ಉಪಕರಣಗಳನ್ನು ತರಲು ಸಾಧ್ಯವಾಗಿಲ್ಲ. ಇದಕ್ಕೆ ಯಾರು ಸಹ ಪ್ರಯತ್ನಿಸಿಲ್ಲ ಎಂದು ಭಾವಿಸಿದ್ದೀನಿ. 54 ಸಾವಿರ ಅಭ್ಯರ್ಥಿಗಳು ಪರೀಕ್ಷೆ ಬರೆಯಬೇಕಿತ್ತು. ಕೆಲವರು ಗೈರಾಗಿದ್ದಾರೆ. ಆದಷ್ಟು ಬೇಗ ಮೌಲ್ಯಮಾಪನವನ್ನು ಮುಗಿಸಿ, ಆಯ್ಕೆ‌ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗುವುದು‌ ಎಂದರು.

ಭರ್ಜರಿ ನೇಮಕಾತಿ:- ಮುಂದಿನ ಹಂತದಲ್ಲಿ 403 ಪರೀಕ್ಷೆ ನಡೆಸಲಾಗುವುದು. ಅದನ್ನು ಅಹ ಕೆಇಎ ಅವರಿಗೆ ವಹಿಸಲಾಗುವುದು. ನೋಟಿಫಿಕೇಷನ್ ಆಗಿ, ಫಿಸಿಕಲ್ ಟೆಸ್ಟ್ ಸಹ ಮುಗಿದಿದೆ. ಪರೀಕ್ಷೆ ಬಾಕಿ ಇದೆ‌. ಈ ಎರಡು ನೇಮಕಾತಿ ಪ್ರಕ್ರಿಯೆ ಮುಗಿದರೆ ಇಲಾಖೆಗೆ ಒಟ್ಟು 948 ಪಿಎಸ್ಐ ಸಿಗುತ್ತಾರೆ‌ ಎಂದರು.

403 ಹುದ್ದೆಗಳ ನೇಮಕಾತಿ ಪರೀಕ್ಷೆಯನ್ನು ಕರ್ನಾಟಕ‌ ಪರೀಕ್ಷಾ ಪ್ರಾಧಿಕಾರದವರಿಗೆ ವಹಿಸುವ ಬಗ್ಗೆ ಚಿಂತನೆ ಇದೆ. ಯಾವುದೇ ರೀತಿಯ ಗೊಂದಲಗಳಾಗದಂತೆ ಅಚ್ಚುಕಟ್ಟಾಗಿ ಪರೀಕ್ಷೆ ನಡೆಸಿದ ಕೆಇಎ ನಿರ್ದೇಶಕಿ ರಮ್ಯಾ ಅವರಿಗೆ ಧನ್ಯವಾದ. ಮುಂದಿನ ನೇಮಕಾತಿಗಳಲ್ಲಿಯೂ ಇದೇ ರೀತಿ ಪರೀಕ್ಷೆ ನಡೆಸಿಕೊಡಲಿ ಎಂದರು.

ಈ ಎರಡು ನೇಮಕಾತಿ ಪ್ರಕ್ರಿಯೆ ಮುಗಿದ ನಂತರ 660 ಪಿಎಸ್ಐ ಹುದ್ದೆಗಳಿಗೆ ನೇಮಕಾತಿಗೆ ನೋಟಿಫಿಕೇಷನ್ ಹೊರಡಿಸಲಾಗುವುದು. ಈಗಾಗಲೇ ಆರ್ಥಿಕ ಇಲಾಖೆಯ ಅನುಮೋದನೆ ದೊರೆತಿದ್ದು, ಹಂತ ಹಂತವಾಗಿ ನೇಮಕಾತಿ‌ ಮಾಡಿಕೊಳ್ಳಲಾಗುವುದು. ಮುಂದಿನ ಎರಡು ವರ್ಷದೊಳಗೆ ಈ ಎಲ್ಲ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಮುಗಿಸಲಾಗುವುದು ಎಂದು ತಿಳಿಸಿದರು.

ತನಿಖೆ ಬಳಿಕ ಸುಮ್ಮನಾಗ್ತಾರೆ:-
ಕಲಬುರಗಿಯಲ್ಲಿ ಅಂಬೇಡ್ಕರ್ ಪುತ್ಥಳಿಗೆ ಅಪಮಾನ ಮಾಡಿದ ಪ್ರಕರಣದಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ನ್ಯಾಯಾಲಯಕ್ಕೆ ಹಾಜರುಪಡಿಸಿ ವಶಕ್ಕೆ ಪಡೆದು ವಿಚಾರಣೆ ನಡೆಸಲಿದ್ದಾರೆ‌. ಕೃತ್ಯದ ಉದ್ದೇಶ ಏನು ಎಂಬುದು ತನಿಖೆಯಿಂದ ಹೊರಬರಬೇಕಿದೆ. ಈ ರೀತಿಯ ಘಟನೆ ನಡೆದಾಗ ಯಾವುದಾದರೂ ಉದ್ದೇಶ ಇದ್ದೇ ಇರುತ್ತದೆ. ಅವರ ಉದ್ದೇಶ ಏನಾಗಿತ್ತು ಎಂಬುದನ್ನು ತಿಳಿದುಕೊಳ್ಳಬೇಕು. ಯಾರಾದದರೂ ಕುಮ್ಮಕ್ಕು ಇದೆಯಾ ಎಂಬುದು ಗೊತ್ತಾಗಲಿದೆ ಎಂದರು.

ಬಿಜೆಪಿಯವರು ಪ್ರತಿಭಟನೆ ಮಾಡುವ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಪ್ರಕರಣದ ತನಿಖೆ ಬಳಿಕ ಸತ್ಯಾಸತ್ಯತೆ ಹೊರಬೀಳಲಿದೆ. ಯಾರು ಮಾಡಿದ್ದಾರೆ ಎಂಬುದು ಗೊತ್ತಾದಮೇಲೆ ತಾವೇ ಸುಮ್ಮನಾಗುತ್ತಾರೆ. ನಾನು ಈಗಲೇ ಊಹಾತ್ಮಕವಾಗಿ ಯಾರು ಮಾಡಿದ್ದಾರೆ, ಯಾಕೆ ಮಾಡಿದ್ದಾರೆ ಎಂದು ಹೇಳುವುದಿಲ್ಲ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಎಲ್ಲವನ್ನು ಪರೀಶೀಲನೆ ನಡೆಸಲಾಗುವುದು. ಸಾರ್ವಜನಿಕವಾಗಿ ಯಾರು ಅಂತ ಹೇಳುವುದಕ್ಕೆ ಬರುವುದಿಲ್ಲ. ಸಾಕ್ಷ್ಯಧಾರಗಳ ಸಮೇತ ಉತ್ತರಿಸಲಾಗುವುದು ಎಂದು ಹೇಳಿದರು.

ಹೆಚ್ಚು ಸೀಟ್ ಗೆಲ್ತಿವಿ:
ಲೋಕಸಭೆಯಲ್ಲಿ ಹೆಚ್ಚು ಸ್ಥಾನ ಗೆಲ್ಲದೇ ಇದ್ದರೆ ನಮಗೆ ಅಧಿಕಾರದಲ್ಲಿ ಮುಂದುವರೆಯಲು ನೈತಿಕತೆ ಇರುತ್ತಾ ಎಂಬ ಸಚಿವ ರಾಜಣ್ಣ ಹೇಳಿಕೆಯ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ಲೋಕಸಭೆ ಚುಮಾವಣೆಯಲ್ಲಿ ನಾವು ಹೆಚ್ಚು ಸ್ಥಾನ ಗೆಲ್ಲುತ್ತೇವೆ. ಈ ಹಿಂದೆ 27 ಸೀಟ್ ಗೆದ್ದಿದ್ದನ್ನ ಸ್ಮರಿಸಬೇಕು ಎಂದರು. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಒಳ್ಳೆಯ ವಾತಾವರಣ ಇದೆ. ಗ್ಯಾರಂಟಿ ಯೋಜನೆಗಳ ಬಗ್ಗೆ ಜನರಿಂದ ಒಳ್ಳೆ‌ ಪ್ರತಿಕ್ರಿಯೆ ಲಭ್ಯವಾಗುತ್ತಿದೆ. ಎಂಟು ತಿಂಗಳಲ್ಲಿ ಜನಪರ ಆಡಳಿತ ನೀಡಿರುವುದರಿಂದ ನಾವು ಹೆಚ್ಚು ಸ್ಥಾನ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!