ಬೆಳಗಾವಿ: ನಗರದ ಮೂಲೆ ಮೂಲೆಯಿಂದ, ಹಳ್ಳಿ- ಪಟ್ಟಣಗಳಿಂದ ಅಪಾರ ಸಂಖ್ಯೆಯ ಕನ್ನಡಾಭಿಮಾನಿಗಳು ಬಂದು ಸೇರಿ ಇಲ್ಲಿನ ವೀರರಾಣಿ ಚೆನ್ನಮ್ಮ ವೃತ್ತದಲ್ಲಿ ಕನ್ನಡಿಗರ ಸಂಭ್ರಮ ಮುಗಿಲು ಮುಟ್ಟಿತು.
ಎತ್ತ ನೋಡಿದರೂ ಹಳದಿ- ಕೆಂಪು ಬಾವುಟಗಳ ಹಾರಾಟ, ಶಲ್ಯಗಳ ತೂರಾಟ, ಕಿರೀಟ- ಟೋಪಿ ಧರಿಸಿದ ಜನಸಾಗರವೇ ಹರಿದು ಬಂದಿತ್ತು. ಇಲ್ಲಿನ ರಾಣಿ ಚೆನ್ನಮ್ಮ ವೃತ್ತದಲ್ಲಿ ಸಾಕ್ಷಾತ್ ಕನ್ನಡ ಕುಲದೇವಿ ಭುವನೇಶ್ವರಿಯೇ ಅವತರಿಸಿದಳು. ಪುಟಾಣಿ ಮಕ್ಕಳಿಂದ ಹಿಡಿದು, ಯುವತಿಯರು, ಯುವಕರು, ಮಹಿಳೆಯರು, ಹಿರಿಯರು ಕೂಡ ಕನ್ನಡ ನಾಡಗೀತೆಗೆ ಸೆಲ್ಯೂಟ್ ಮಾಡಿದರು. ರಂಗಗೀತೆ, ಜನಪದ ಹಾಡು, ಸಿನಿಗೇತೆಗಳನ್ನು ಹಾಡಿ ನಲಿದರು ಯುವಜನರಂತೂ ಎದೆ ನಡುಗಿಸುವಂಥ ಡಿ.ಜೆ ಸೌಂಡಿನ ಸದ್ದಿಗೆ ಕುಣಿದು ಕುಪ್ಪಳಿಸಿದರು. ಎಲ್ಲರಲ್ಲೂ ‘ಕನ್ನಡತನದ ಹುಚ್ಚು’ ಮೈ ನವಿರೇಳುವಂತೆ ಮಾಡಿದೆ.
ಒಂದೆಡೆ ಸ್ತಬ್ಧಚಿತ್ರಗಳ ಮೆರವಣಿಗೆ, ಮತ್ತೊಂದೆಡೆ ಯುವಜನರ ಹಾಡು- ಕುಣಿತ. ನಗರದ ಮನೆಮನೆಯ ಮೇಲೂ, ಬೀದಿಬೀದಿಗಳಲ್ಲೂ ಹಾರಾಡಿದ ಕನ್ನಡ ಬಾವುಟಗಳ ಸಾಲು, ಕಣ್ಣು ಹಾಯಿಸಿದಷ್ಟೂ ಕಿಕ್ಕಿರಿದು ಸೇರಿದ ಜನ, ತನು- ಮನಗಳಲ್ಲೂ ಮೇಳೈಸಿದ ನಾಡು- ನುಡಿಯ ಸಂಭ್ರಮ ಮನೆ ಮಾಡಿದೆ.
ರಾಜ್ಯದ ಬೇರೆಬೇರೆ ಕಡೆಗಳಿಂದ ಬಂದು ಸೇರಿದ 3,000ಕ್ಕೂ ಹೆಚ್ಚು ಪೊಲೀಸರು ಬಿಗಿ ಭದ್ರತೆ ಕೈಗೊಂಡರು. ಒಂದೆಡೆ ಎಂಇಎಸ್ ಪುಂಡರ ಮೆರವಣಿಗೆ ಸುತ್ತ ಸರ್ಪಗಾವಲು ಹಾಕಿದರೆ, ಇನ್ನೊಂದೆಡೆ ಕನ್ನಡಿಗರ ಸಂಭ್ರಮದಲ್ಲೂ ಕುಂದು ಬಾರದಂತೆ ನೋಡಿಕೊಂಡರು. 300 ಸಿ.ಸಿ.ಟಿ.ವಿ ಕ್ಯಾಮೆರಾ ಹಾಗೂ ಹಲವು ಡ್ರೋನ್ಗಳನ್ನು ಅಳವಡಿಸಿ ಹದ್ದಿನ ಕಣ್ಣಿಟ್ಟಿದ್ದಾರೆ.