ಚಾಮರಾಜನಗರ: ಜಿಲ್ಲೆಯ ಗ್ರಾಮೀಣ ಭಾಗದಲ್ಲೇ ಹೆಚ್ಚು ಕೊರೊನಾ ವ್ಯಾಪಿಸುತ್ತಿರುವ ನಡುವೆ ಹರ್ಷದಾಯಕ ಬೆಳವಣಿಗೆ ಎಂದರೆ ಚಾಮರಾಜನಗರ ಜಿಲ್ಲೆಯ 174 ಹಳ್ಳಿಗಳು ಕೊರೊನಾ ಮುಕ್ತವಾಗಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 503 ಕಂದಾಯ ಗ್ರಾಮಗಳು ಮತ್ತು ದಾಖಲೆ ಗ್ರಾಮಗಳಲ್ಲಿ ಒಟ್ಟು 174 ಹಳ್ಳಿಗಳಲ್ಲಿ ಸದ್ಯಕ್ಕೆ ಶೂನ್ಯ ಪ್ರಕರಣ ದಾಖಲಿಸಿವೆ. ಇವುಗಳಲ್ಲಿ ಕೆಲವು ಗ್ರಾಮಗಳಲ್ಲಿ ಇದುವರೆಗೂ ಒಂದೂ ಪ್ರಕರಣಗಳು ದಾಖಲಾಗಿಲ್ಲ. ಕೊರೊನಾ ಸೋಂಕಿತರು ಗುಣಮುಖರಾಗಿರುವ ಗ್ರಾಮಗಳು ಹಾಗೂ ಕೊರೊನಾ ಮುಕ್ತ ಹಳ್ಳಿಗಳ ಪಟ್ಟಿಯಲ್ಲಿ ಹಾಡಿಗಳು ಸೇರಿದ್ದು ಬಹುತೇಕ ಗಿರಿಜನರ ಹಾಡಿಗಳು ಕೊರೊನಾ ಗೆದ್ದು ಬೀಗಿವೆ ಎಂದರು.
ಚಾಮರಾಜನಗರ ತಾಲೂಕಿನ 23 ಗ್ರಾಪಂಗಳ ಒಟ್ಟು 61 ಹಳ್ಳಿಗಳು, ಗುಂಡ್ಲುಪೇಟೆ ತಾಲೂಕಿನ 17 ಗ್ರಾಪಂಗಳ ಒಟ್ಟು 24 ಹಳ್ಳಿಗಳು, ಕೊಳ್ಳೇಗಾಲ ತಾಲೂಕಿನ 7 ಗ್ರಾಪಂಗಳ 15 ಹಳ್ಳಿಗಳು, ಹನೂರು ತಾಲೂಕಿನ 16 ಗ್ರಾಪಂಗಳ ಒಟ್ಟು 65 ಹಳ್ಳಿಗಳು ಹಾಗೂ ಯಳಂದೂರು ತಾಲೂಕಿನ 3 ಗ್ರಾಪಂಗಳ ಒಟ್ಟು 9 ಹಳ್ಳಿಗಳಲ್ಲಿ ಶೂನ್ಯ ಕೊರೊನಾ ಪ್ರಕರಣಗಳಿವೆ ಎಂದು ತಿಳಿಸಿದರು.
ಇನ್ನು ಚಾಮರಾಜನಗರ ತಾಲೂಕು ಹಾಗೂ ಹನೂರು ತಾಲೂಕಿನಲ್ಲೇ ಹೆಚ್ಚು ಕೊರೊನಾ ಮುಕ್ತ ಗ್ರಾಮಗಳಿವೆ. ಹಳ್ಳಿಗಳಲ್ಲಿ ಕೊರೊನಾ ತಡೆಗೆ ಹೋಂ ಐಸೋಲೇಷನ್ ರದ್ದುಮಾಡಿದ್ದು, ಕೊರೊನಾ ಲಕ್ಷಣಗಳಿರುವ ರೋಗಿಗಳನ್ನು ಕಡ್ಡಾಯವಾಗಿ ಕೋವಿಡ್ ಟೆಸ್ಟ್ ಮುಂತಾದ ಕಟ್ಟುನಿಟ್ಟಿನ ಕ್ರಮವನ್ನು ಜಿಲ್ಲಾಡಳಿತ ಕೈಗೊಂಡಿದೆ.