ನವದೆಹಲಿ: ಇನ್ಫೋಸಿಸ್ ಸಹ ಸಂಸ್ಥಾಪಕ ನಂದನ್ ನಿಲೇಕಣಿ ಅವರು ತಾವು ಎಂಜಿನಿಯರಿಂಗ್ ಪದವಿ ಪಡೆದ ‘ಬಾಂಬೆ ಐಐಟಿ’ಗೆ ಬರೋಬ್ಬರಿ 315 ಕೋಟಿ ರೂ. ದೇಣಿಗೆ ನೀಡಿದ್ದಾರೆ. ವಿಶ್ವ ದರ್ಜೆಯ ಮೂಲಸೌಕರ್ಯವನ್ನು ಉತ್ತೇಜಿಸಲು, ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆಯಲ್ಲಿ ಸಂಶೋಧನೆಗೆ ಸಹಾಯ ಮಾಡಲು ಹಾಗೂ ಬಾಂಬೆಯ ಐಐಟಿಯಲ್ಲಿ ಉತ್ತಮವಾದ ಟೆಕ್ ಸ್ಟಾರ್ಟ್ಅಪ್ ಪರಿಸರ ವ್ಯವಸ್ಥೆಯನ್ನು ಪೋಷಿಸಲು ಈ ದೇಣಿಗೆಯ ಮುಖ್ಯ ಉದ್ದೇಶವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿಲಾಗಿದೆ. ಮಾತ್ರವಲ್ಲದೇ ಇದು ಭಾರತದಲ್ಲಿ ಹಳೆ ವಿದ್ಯಾರ್ಥಿಯೊಬ್ಬರು ನೀಡಿರುವ ಅತಿ ದೊಡ್ಡ ದೇಣಿಗೆಗಳಲ್ಲಿ ಒಂದು ಎನಿಸಿಕೊಂಡಿದೆ.
ಈ ಬಗ್ಗೆ ತಿಳಿಸಿರುವ ನಿಲೇಕಣಿ, ಬಾಂಬೆ ಐಐಟಿ ನನ್ನ ಜೀವನದ ಮೂಲಾಧಾರವಾಗಿದೆ. ನನ್ನ ಭವಿಷ್ಯವನ್ನು ಉತ್ತಮವಾಗಿ ರೂಪಿಸಿ, ಈ ಪ್ರಯಾಣಕ್ಕೆ ಅಡಿಪಾಯ ಹಾಕಿದೆ. ಈ ಗೌರವಾನ್ವಿತ ಸಂಸ್ಥೆಯೊಂದಿಗೆ ನನ್ನ 50 ವರ್ಷಗಳ ಒಡನಾಟ ಈಗ ಪೂರೈಸಿದ್ದು, ಅದಕ್ಕೆ ಭವಿಷ್ಯ ಹಾಗೂ ಕೊಡುಗೆಯನ್ನು ನೀಡಲು ನಾನು ಕೃತಜ್ಞನಾಗಿದ್ದೇನೆ ಎಂದಿದ್ದಾರೆ. ಈ ದೇಣಿಗೆ ಕೇವಲ ಹಣಕಾಸಿನ ಕೊಡುಗೆಗಿಂತಲೂ ಹೆಚ್ಚಿನದ್ದಾಗಿದೆ. ಇದು ನನಗೆ ಹೆಚ್ಚಿನದನ್ನು ನೀಡಿರುವ ಸ್ಥಳಕ್ಕೆ ಗೌರವವಾಗಿದ್ದು, ನಾಳೆ ನಮ್ಮ ಜಗತ್ತನ್ನು ರೂಪಿಸುವ ವಿದ್ಯಾರ್ಥಿಗಳಿಗೆ ಬದ್ಧತೆಯಾಗಿದೆ ಎಂದು ಅವರು ಹೇಳಿದ್ದಾರೆ.
ಐಐಟಿ ಬಾಂಬೆಯ ಹಳೆಯ ವಿದ್ಯಾರ್ಥಿಯಾಗಿರುವ ನಿಲೇಕಣಿ 1973ರಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಸಂಸ್ಥೆಯೊಂದಿಗಿನ ಒಡನಾಟಕ್ಕೆ 50 ವರ್ಷ ಪೂರ್ಣಗೊಂಡ ಹಿನ್ನೆಲೆ ಅವರು ಈಗ 315 ಕೋಟಿ ರೂ. ದೇಣಿಗೆ ನೀಡಿದ್ದಾರೆ. ಈ ಹಿಂದೆ ಅವರು 85 ಕೋಟಿ ರೂ. ದೇಣಿಗೆ ನೀಡಿದ್ದರು. ಹೀಗಾಗಿ ಅವರು ಸಂಸ್ಥೆಗೆ ಒಟ್ಟು 400 ಕೋಟಿ ರೂ. ದೇಣಿಗೆ ನೀಡಿದಂತಾಗುತ್ತದೆ.