ಬೆಂಗಳೂರು : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ISRO) ಶನಿವಾರ (ಜನವರಿ 6) ಬಾಹ್ಯಾಕಾಶ ಕ್ಷೇತ್ರದಲ್ಲಿ ಮತ್ತೊಂದು ಇತಿಹಾಸ ಸೃಷ್ಟಿಸಲಿದೆ.
ಭಾರತದ ಚೊಚ್ಚಲ ಬಾಹ್ಯಾಕಾಶ ಆಧಾರಿತ ಸೌರ ಮಿಷನ್ ಆಗಿರುವ ಆದಿತ್ಯ ಎಲ್1 ಬಾಹ್ಯಾಕಾಶ ನೌಕೆಯು (Aditya L1 Mission) ಶನಿವಾರ ಅಂತಿಮ ಕಕ್ಷೆಯನ್ನು ಸೇರಲಿದೆ. ಸಂಜೆ 4 ಗಂಟೆ ಸುಮಾರಿಗೆ ಬಾಹ್ಯಾಕಾಶ ನೌಕೆಯು ಸೂರ್ಯನ ಲ್ಯಾಗ್ರೇಂಜ್ ಪಾಯಿಂಟ್ (L Point) ಸೇರಲಿದ್ದು, ಅಂತಿಮ ಹಂತದ ಕಕ್ಷೆ ಬದಲಾವಣೆಯಾದರೆ ಇಸ್ರೋ ಮಹತ್ವದ ಮೈಲುಗಲ್ಲು ಸಾಧಿಸಿದಂತಾಗಲಿದೆ.
ಸೂರ್ಯನ ವಿವರವಾದ ಅಧ್ಯಯನಕ್ಕಾಗಿ ಏಳು ವಿಭಿನ್ನ ಪೇಲೋಡ್‌ಗಳನ್ನು ಹೊಂದಿದೆ. ಆದಿತ್ಯ ಎಲ್1 ಬಾಹ್ಯಾಕಾಶ ನೌಕೆಯಲ್ಲಿರುವ ಪೇಲೋಡ್‌ಗಳ ಪೈಕಿ ನಾಲ್ಕು ಸೂರ್ಯನ ಬೆಳಕನ್ನು ಪರಿಶೀಲಿಸಲಿವೆ ಮತ್ತು ಇತರ ಮೂರು ಪ್ಲಾಸ್ಮಾ ಮತ್ತು ಕಾಂತೀಯ ಕ್ಷೇತ್ರಗಳ ಇನ್-ಸಿಟು ನಿಯತಾಂಕಗಳನ್ನು ಅಳೆಯಲಿವೆ.
ಈ ಉಪಕರಣಗಳು ಸೌರ ಜ್ವಾಲೆಗಳು ಮತ್ತು ಕರೋನಲ್ ಮಾಸ್ ಎಜೆಕ್ಷನ್‌ಗಳಂತಹ ಸೌರ ಚಟುವಟಿಕೆಗಳ ಡೇಟಾವನ್ನು ಒದಗಿಸಲಿವೆ ಎಂದು ಇಸ್ರೋ ಹೇಳಿದೆ.