ಬೆಂಗಳೂರು : ಅಮಾಯಕ ವ್ಯಕ್ತಿಯನ್ನು ಕಾಟನ್‍ಪೇಟೆ ಪೊಲೀಸರು ಠಾಣೆಗೆ ಕರೆದೊಯ್ಯದೇ ಲಾಡ್ಜ್‌ಗೆ ಕರೆದೊಯ್ದು 3 ದಿನಗಳ ಕಾಲ ಅಕ್ರಮ ಬಂಧನದಲ್ಲಿಟ್ಟು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ದೂರು ನೀಡಲಾಗಿದೆ. ಸಬ್‍ಇನ್ಸ್ ಪೆಕ್ಟರ್ ಸಂತೋಷ್ ಗೌಡ, ಸಿಬ್ಬಂದಿ ಧ್ಯಾನ್ ಪ್ರಕಾಶ್ ಹಾಗೂ ಸಚಿನ್ ವಿರುದ್ಧ ವೆಂಕಟ್ ಎಂಬವರು ದೂರು ನೀಡಿದ್ದಾರೆ. ಜೊತೆಗೆ ಪೊಲೀಸ್ ಕಮಿಷನರ್ ಹಾಗೂ ಮಾನವಹಕ್ಕುಗಳ ಆಯೋಗಕ್ಕೂ ಕೋಣನಕುಂಟೆ ನಿವಾಸಿ ವೆಂಕಟ್ ದೂರು ನೀಡಿದ್ದಾರೆ.
ಜನವರಿ 12 ರಂದು ಬೆಂಗಳೂರಿನಿಂದ ಮುಳಬಾಗಿಲಿಗೆ ವೆಂಕಟೇಶ್ ತೆರಳಿದ್ದರು. ಮುಳಬಾಗಿಲಿನ ಪಕ್ಕದ ತನ್ನ ಹುಟ್ಟೂರಾದ ಬೇವಳ್ಳಿಗೆ ತೆರಳಲು ಮಣಿ ಎಂಬಾತನಿಂದ ಡ್ರಾಪ್ ಪಡೆಯುತ್ತಿದ್ದರು. ಈ ಮಣಿ ಎಂಬಾತನ ವಿರುದ್ಧ ಕಾಟನ್ ಪೇಟೆ ಠಾಣೆಯಲ್ಲಿ 420 ಅಡಿ ಕೇಸ್ ದಾಖಲಾಗಿತ್ತು. ಮಣಿಯನ್ನ ಹುಡುಕಾಡ್ತಿದ್ದ ಕಾಟನ್ ಪೇಟೆ ಪೊಲೀಸರಿಗೆ ಮಣಿ ಲೊಕೇಷನ್ ಮುಳಬಾಗಿಲು ತೋರಿಸಿತ್ತು.
ಪೊಲೀಸರು ಮುಳಬಾಗಿಲಿನ ಕೂತಂಡಹಳ್ಳಿ ಕೆರೆ ಬಳಿ ದಾಳಿ ಮಾಡಿ ಮಣಿ ಜೊತೆ ವೆಂಕಟ್ ರನ್ನು ಕರೆದೊಯ್ದಿದ್ರು. ಆದರೆ ಮಣಿ ಮೇಲಿದ್ದ ಕೇಸ್ ಗೂ ವೆಂಕಟ್ ರಿಗೂ ಯಾವುದೇ ಸಂಬಂಧವಿರಲಿಲ್ಲ. ಆದರೂ ಇವರನ್ನು ಮುಳಬಾಗಿಲಿನಿಂದ ಜನವರಿ 13ರ ಬೆಳಗ್ಗೆ ಕಾಟನ್ ಪೇಟೆಯ ಪ್ರಶಾಂತ್ರಾಜ್ ಲಾಡ್ಜ್ ನಲ್ಲಿ ಪೊಲೀಸರು ಇರಿಸಿದ್ದರು. ಈ ವೇಳೆ ನನ್ನನ್ನು ಯಾಕೆ ಕರೆತಂದಿದ್ದೀರಾ ಎಂದು ವೆಂಕಟ್ ಪೊಲೀಸರನ್ನು ಪ್ರಶ್ನಿಸಿದ್ರು. ಆಗ ಪೊಲೀಸರು ಸುಮ್ನೆ ಇರಬೇಕು ಇಲ್ಲವಾದ್ರೆ ಎನ್ ಕೌಂಟರ್ ಮಾಡ್ತೀವಿ, ಇರೋ ಕೆಲಸನೂ ಕಳೆದುಕೊಳ್ಳುವ ಹಾಗೆ ಮಾಡ್ತೀವಿ ಎಂದು ಅವಾಜ್ ಹಾಕಿದ್ರು. ಅಲ್ಲದೆ ಮೂರು ದಿನಗಳ ಕಾಲ ಪೊಲೀಸ್ ಠಾಣೆಗೆ ಕರೆದೊಯ್ಯದೇ ಲಾಡ್ಜ್ ನಲ್ಲಿಟ್ಟಿದ್ರು ಎಂಬ ಆರೋಪ ಕೇಳಿಬಂದಿದೆ.