ಬೆಂಗಳೂರು: ಜಾಗತಿಕವಾಗಿ ಕೋವಿಡ್ ಲಸಿಕೆ ಖರೀದಿ ಮಾಡಲು ಮುಂದಾಗಿರುವ ರಾಜ್ಯಕ್ಕೆ ಇ- ಟೆಂಡರ್ ಸಲ್ಲಿಸಿದ್ದ ಎರಡು ಕಂಪನಿಗಳು ಸಕಾಲಕ್ಕೆ ಅಗತ್ಯ ದಾಖಲೆಗಳನ್ನು ನೀಡದ ಕಾರಣಕ್ಕೆ ಸರಕಾರವೇ ನೇರವಾಗಿ ತಯಾರಿಕಾ ಕಂಪನಿಗಳಿಂದಲೇ ಲಸಿಕೆ ಖರೀದಿಸಲು ಮುಂದಾಗಿದೆ.
ಚಲನಚಿತ್ರ ಕಲಾವಿದರ ಸಂಘದಲ್ಲಿ ಕನ್ನಡ ಸಿನಿಮಾ ಕಲಾವಿದರಿಗೆ ಕೋವಿಡ್ ಲಸಿಕೆ ನೀಡುವ ಅಭಿಯಾನಕ್ಕೆ ಚಾಲನೆ ನೀಡಿದ ನಂತರ ಮಾಧ್ಯಮಗಳ ಜತೆ ಮಾತನಾಡಿದ ರಾಜ್ಯ ಕಾರ್ಯಪಡೆ ಅಧ್ಯಕ್ಷರಾದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಈ ವಿಷಯ ತಿಳಿಸಿದರು.
ಮೇ 15ರಂದು ಕರೆಯಲಾಗಿದ್ದ ಟೆಂಡರ್‌ನಲ್ಲಿ ಮುಂಬಯಿಯ ಬುಲಕ್ ಎಂಆರ್‌ಒ ಇಂಡಸ್ಟ್ರೀಯಲ್ ಸಪ್ಲೈ ಹಾಗೂ ಬೆಂಗಳೂರಿನ ತುಳಸಿ ಸಿಸ್ಟಮ್ಸ್ ಕಂಪನಿಗಳು ಲಸಿಕೆ ಪೂರೈಕೆ ಮಾಡುವುದಾಗಿ ಮುಂದೆ ಬಂದಿದ್ದವು. ಟೆಂಡರ್‌ಗೆ ಅರ್ಜಿ ಹಾಕಿಕೊಂಡಿದ್ದವು. ಆ ಕಂಪನಿಗಳು ತಯಾರು ಮಾಡುವ ಕಂಪನಿಗಳಿಂದ ಲಸಿಕೆ ಪಡೆದು ರಾಜ್ಯಕ್ಕೆ ಪೂರೈಸುವುದಾಗಿ ಹೇಳಿದ್ದವು. ಇದಕ್ಕೆ ಸಂಬಂಧಿಸಿ ಹಣಕಾಸು ದಾಖಲೆಗಳೂ ಸೇರಿ ʼಪೂರೈಕೆ ಖಾತರಿʼಯ ದಾಖಲೆ ಹಾಗೂ ಲಸಿಕೆಯ ʼತಾಂತ್ರಿಕ ದಾಖಲೆʼಗಳನ್ನು ಸಲ್ಲಿಸಲಿಲ್ಲ. ಬದಲಿಗೆ ಎರಡು ಸಲ ವರ್ಚುಯಲ್ ಸಭೆಗಳನ್ನು ಕರೆದರೂ ಆಯಾ ಕಂಪನಿಗಳ ಅಧಿಕಾರಿಗಳು ಭಾಗವಹಿಸಲಿಲ್ಲ. ಜತೆಗೆ, ರಷ್ಯಾ ಮೂಲದ ʼಸ್ಪುಟ್ನಿಕ್ʼ ಲಸಿಕೆ ತಯಾರಿಸುವ ಕಂಪನಿಯ ಜತೆ ಮಾಡಿಕೊಂಡಿರುವ ಒಪ್ಪಂದದ ದಾಖಲೆಗಳನ್ನು ಸಲ್ಲಿಸುವಲ್ಲಿಯೂ ಆ ಕಂಪನಿಗಳು ವಿಫಲವಾದವು. ಈ ಹಿನ್ನೆಲೆಯಲ್ಲಿ ಜಾಗತಿಕ ಟೆಂಡರ್ ಪ್ರಕ್ರಿಯೆಯನ್ನು ಕೈಬಿಡಲಾಗಿದೆ ಎಂದು ಡಾ.ಅಶ್ವತ್ಥನಾರಾಯಣ ಮಾಹಿತಿ ನೀಡಿದರು.
ಜಾಗತಿಕ ಟೆಂಡರ್ ತಿರಸ್ಕೃತವಾದ ಕಾರಣ ಮುಕ್ತ ಮಾರುಕಟ್ಟೆಯಲ್ಲಿ ನೇರವಾಗಿ ಲಸಿಕೆ ಖರೀದಿ ಮಾಡುವ ಉದ್ದೇಶ ಇದೆ. ಜಗತ್ತಿನ ಯಾವುದೇ ಔಷಧ ಕಂಪನಿ ಲಸಿಕೆ ಮಾರಲು ಮುಂದೆ ಬಂದರೆ ಖರೀದಿ ಮಾಡಲಾಗುವುದು. ಈಗಾಗಲೇ ಜಾಗತಿಕ ಮಟ್ಟದಲ್ಲಿ ಲಸಿಕೆ ತಯಾರು ಮಾಡುವ ಎಲ್ಲ ಕಂಪನಿಗಳಿಗೆ ಈ ಸಂದೇಶ ರವಾನಿಸಲಾಗಿದೆ. ಲಸಿಕೆಗಾಗಿ ಕಾಯುತ್ತಾ ಕೂರಲು ಸಾಧ್ಯವಿಲ್ಲ. ಮೂರನೇ ಅಲೆಯ ಭೀತಿ ನಮ್ಮ ಮುಂದಿದೆ ಎಂದು ಡಿಸಿಎಂ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಲಾಕ್‌ಡೌನ್ ಮುಂದುವರಿಕೆ ಚರ್ಚೆ ನಡೆದಿಲ್ಲ:
ಲಾಕ್‌ಡೌನ್ ಮುಂದುವರಿಸಬೇಕೆ ಬೇಡವೇ ಎಂಬ ಬಗ್ಗೆ ಸರಕಾರ ಇನ್ನೂ ಯೋಚನೆ ಮಾಡಿಲ್ಲ. ಆದರೆ, ಕೆಲ ವಿಭಾಗಗಳಲ್ಲಿ ಅನ್‌ಲಾಕ್ ಆಗಲೇಬೇಕಿದೆ. ಆದರೆ ಈ ಬಗ್ಗೆ ಇಷ್ಟು ಬೇಗ ಏನೂ ಹೇಳಲಾಗದು ಎಂದು ಡಿಸಿಎಂ ಇದೇ ವೇಳೆ ಹೇಳಿದರು.
“ಲಾಕ್‌ಡೌನ್ ಮುಗಿಯಲು ಇನ್ನೂ ಒಂದು ವಾರ ಕಾಲಾವಕಾಶವಿದೆ. ಇಷ್ಟು ಬೇಗ ಏನನ್ನೂ ಹೇಳಲಾಗದು. ಅಂಕಿ-ಅಂಶಗಳನ್ನು ಪರಿಶೀಲಿಸಿ ನಿರ್ಧಾರ ಕೈಗೊಳ್ಳಬೇಕಿದೆ. ತಜ್ಞರ ಅಭಿಪ್ರಾಯ ಪಡೆಯಬೇಕಿದೆ. ಆದರೆ, ಜೀವ ಉಳಿಯುವುದರ ಜತೆಗೆ ಜೀವನವೂ ನಡೆಯಬೇಕು. ಹೀಗಾಗಿ ಕೆಲ ರಿಯಾಯಿತಿಗಳನ್ನು ಕೊಡಬೇಕು” ಎಂದರು.