ಹೃದಯ ತಜ್ಞ ಎಂದು ಪರಿಚಯಿಸಿಕೊಂಡು ಉಡುಗೊರೆ ಕಳುಹಿಸುವ ನೆಪದಲ್ಲಿ ಬೆಂಗಳೂರಿನ ವಿಧವೆಯೊಬ್ಬರಿಗೆ 80 ಲಕ್ಷ ರೂ. ವಂಚಿಸಿದ ಘಟನೆ ನಡೆದಿದೆ.
ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ 50 ವರ್ಷದ ಮಹಿಳೆ ಇನ್ ಸ್ಟಾಗ್ರಾಂನಲ್ಲಿ ತಜ್ಞರಿಗಾಗಿ ಹುಡುಕಾಟ ನಡೆಸಿದಾಗ ಮಾಬಿಸ್ ಹಾರ್ಮನ್ ಎಂಬಾತ ಪರಿಚಯವಾಗಿದ್ದು, ಈತ ನಾನು ಹೃದಯ ತಜ್ಞ ಎಂದು ಪರಿಚಯಿಸಿಕೊಂಡಿದ್ದಾನೆ.
ನಕಲಿ ಡಾಕ್ಟರ್ ಎಂದು ತಿಳಿಯದೆ ನಂಬಿದ್ದ ಮಹಿಳೆ, ಇನ್ ಸ್ಟಾಗ್ರಾಂ ನಿಂದ ವಾಟ್ಸಪ್ ಮೂಲಕ ಪರಿಸ್ಪರ ಚಾಟ್ ಮಾಡುತ್ತಿದ್ದು, ಆತ ಕೊಡುವ ಎಲ್ಲಾ ಸಲಹೆಗಳನ್ನ ಪಾಲಿಸುತ್ತಿದ್ದರು. ಮಹಿಳೆ ನಂಬಿಕೆ ಪಡೆದಿದ್ದೇನೆ ಎಂದು ಭಾವಿಸುತ್ತಿದ್ದಂತೆ ಮಾವಿಸ್ ಉಡುಗೊರೆ ಕಳುಹಿಸಿಕೊಟ್ಟಿದ್ದಾನೆ.
ಇಂಗ್ಲೆಂಡ್ ನಿಂದ ಕರೆನ್ಸಿ ಮತ್ತು ಗಿಫ್ಟ್ ಬಂದಿದ್ದು, ಮಾವಿಸ್ ಎಂಬುವವರಿಂದ ನಿಮ್ಮ ಹೆಸರಿಗೆ ಗಿಫ್ಟ್ ಬಂದಿದ್ದು, ಅದನ್ನು ಸ್ವೀಕರಿಸಬೇಕು ಎಂದು ಕಸ್ಟಮ್ಸ್ ಅಧಿಕಾರಿ ಹೆಸರಿನಲ್ಲಿ ವ್ಯಕ್ತಿಯೊಬ್ಬರು ಕರೆ ಮಾಡಿದ್ದಾರೆ. ಕೂಡಲೇ ಮಾವಿಸ್ ಗೆ ಕರೆ ಮಾಡಿ ನನಗೆ ಗಿಫ್ಟ್ ಯಾಕೆ ಕಳುಹಿಸಿದಿರಿ? ಇದೆಲ್ಲಾ ಏನು ಎಂದು ಪ್ರಶ್ನಿಸಿದಾಗ ನನಗೆ ಯಾಕೆ ಗಿಫ್ಟ್ ಕಳಿಸಿದ್ರಿ ಎಂದು ಮಹಿಳೆ ಪ್ರಶ್ನಿಸಿದಾಗ, ಗೆಳೆಯನಾಗಿ ಕಳುಹಿಸಿದ್ದು, ಸ್ವೀಕರಿಸಿ ಎಂದು ಮನವೊಲಿಸಿದ್ದಾನೆ.
ಮಹಿಳೆ ಎರಡು ದಿನದ ನಂತರವೂ ಉಡುಗೊರೆ ಸ್ವೀಕರಿಸದೇ ಇದ್ದಾಗ ಮತ್ತೆ ಕಸ್ಟಮ್ಸ್ ಅಧಿಕಾರಿ ಹೆಸರಿನಲ್ಲಿ ಕರೆ ಮಾಡಿದ ಮಹಿಳೆ, ನೀವು ತುಂಬಾ ದಿನವಾದ್ರೂ ಸ್ವೀಕರಿಸಿಲ್ಲ. ವಿತ್ತ ಸಚಿವಾಲಯದಿಂದ ನಿಮ್ಮ ಹೆಸರಿಗೆ ನೋಟಿಸ್ ಬಂದಿದೆ ಎಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಕಡೆಯಿಂದ ಫೇಕ್ ಲೆಟರ್ ತೋರಿಸಿ ಬೆದರಿಸಿದ್ದಾರೆ.
ಇದರಿಂದ ಗಾಬರಿಗೊಂಡಿದ್ದ ಮಹಿಳೆ ಎಷ್ಟು ಪೇ ಮಾಡಬೇಕು ಎಂದು ಕೇಳಿದಾಗ ಗಿಫ್ಟ್ ಜೊತೆಗೆ ಕರೆನ್ಸಿ ಕೂಡ ಇರುವುದರಿಂದ 60 ಲಕ್ಷ ಆಗುತ್ತೆ ಎಂದಿದ್ದಾರೆ. ಕೂಡಲೇ ಹಣ ಕೊಟ್ಟ ಬಳಿಕ ಕರೆನ್ಸಿ ಎಕ್ಸ್ ಚೇಂಜ್ ಶುಲ್ಕ ಸೇರಿ 80 ಲಕ್ಷ ಪಡೆದು ವಂಚಿಸಲಾಗಿದೆ.
ಹಣ ಪೇ ಮಾಡಿದ್ದ ಮಹಿಳೆಗೆ ಗಿಫ್ಟ್ ಆಗಲಿ, ಕರೆನ್ಸಿ ಆಗಲಿ ಯಾವುದೂ ಬಂದಿಲ್ಲ. ಆನ್ ಲೈನ್ ನಲ್ಲಿ ಹಣ ಹಾಕಿಸಿಕೊಂಡು ಮೋಸ ಮಾಡಿರುವುದು ಅರಿವಿಗೆ ಬರುತ್ತಿದ್ದಂತೆ ಮಹಿಳೆ ಬನಶಂಕರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.