ರಾಜ್ಯ ಬಿಜೆಪಿಯಲ್ಲಿ ಹೆಚ್ಚುತ್ತಿರುವ ಅಸಮಾಧಾನ, ನಾಯಕತ್ವ ಬದಲಾವಣೆ ಕೂಗು ಮುಂತಾದ ಗೊಂದಲಗಳ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯ ವೀಕ್ಷಕ ಅರುಣ್ ಸಿಂಗ್ ಇಂದು ರಾಜ್ಯಕ್ಕೆ ಭೇಟಿ ನೀಡುತ್ತಿರುವ ಬೆನ್ನಲ್ಲೇ ಬಣಗಳು ಒಗ್ಗಟ್ಟು ಪ್ರದರ್ಶನಕ್ಕೆ ಮುಂದಾಗಿವೆ.
ಅರುಣ್ ಸಿಂಗ್ ಎದುರು ಸುಮಾರು 75 ಬಿಎಸ್ ವೈ ಆಪ್ತರು ಬೆಂಬಲ ಸೂಚಿಸುವ ಮೂಲಕ ಶಾಸಕರು ಒಗ್ಗಟ್ಟು ಪ್ರದರ್ಶನಕ್ಕೆ ಸಿದ್ಧತೆ ನಡೆಸಿದ್ದಾರೆ.
ಯಡಿಯೂರಪ್ಪ ಲಿಂಗಾಯತ ಸಮುದಾಯದ ದೊಡ್ಡ ನಾಯಕರಾಗಿದ್ದು, ಅವರನ್ನು ಸಿಎಂ ಪಟ್ಟದಿಂದ ಕೆಳಗಿಳಿಸಿದರೆ ಪಕ್ಷಕ್ಕೆ ಮುಂದಿನ ದಿನಗಳಲ್ಲಿ ಕಷ್ಟವಾಗಲಿದೆ. ಮುಂಬರುವ ಚುನಾವಣೆ ಮೇಲೂ ವ್ಯತಿರಿಕ್ತ ಪರಿಣಾಮ ಆಗಲಿದೆ. ಆದ್ದರಿಂದ ಬಿಎಸ್ ವೈ ನೇತೃತ್ವದಲ್ಲೇ ಚುನಾವಣೆಗೆ ಹೋಗಬೇಕು ಎಂದು ಆಪ್ತರು ಅರುಣ್ ಸಿಂಗ್ ಗೆ ಮನವರಿಕೆ ಮಾಡಿಕೊಡಲಿದ್ದಾರೆ.
ಅರವಿಂದ್ ಬೆಲ್ಲದ್, ಬಸವನಗೌಡ ಪಾಟೀಲ್ ಯತ್ನಾಳ್, ಸಿಪಿ ಯೋಗೇಶ್ವರ್, ಕೆ.ಎಸ್. ಈಶ್ವರಪ್ಪ ಯಡಿಯೂರಪ್ಪ ಆಡಳಿತ ವಿರುದ್ಧ ಧ್ವನಿ ಎತ್ತಲಿದ್ದು, ಪ್ರತ್ಯೇಕವಾಗಿ ದೂರು ಸಲ್ಲಿಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಸಿಎಂ ಬದಲಾವಣೆಗೆ ವಿರೋಧಿ ಬಣದ ಅಸ್ತ್ರಕ್ಕೆ ಪ್ರತ್ಯಸ್ತ್ರ ಬಿಡಲು ತಂತ್ರಗಾರಿಕೆ ರೂಪಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.