ಲಾಕ್ ಡೌನ್ ಹಿನ್ನೆಲೆಯಲ್ಲಿ ಕೆಲಸ ಇಲ್ಲದ ಕಾರಣ ರಸ್ತೆ ಬದಿ ನಿಲ್ಲಿಸಲಾಗಿದ್ದ ಬುಲ್ಡೋಜರ್ ಅನ್ನೇ ಕಿಡಿಗೇಡಿಗಳು ಗುಜರಿಗೆ ಮಾರಾಟ ಮಾಡಿದ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.
ತಮಿಳುನಾಡು ಮೂಲದ ಸೆಲ್ವರಾಜ್ ಅವರ ಬುಲ್ಡೊಜರ್ ಕದ್ದೊಯ್ದ ಆರೋಪಿಗಳು ಅದನ್ನು ಬಿಡಿ ಭಾಗಗಳಾಗಿ ಮುರಿದು ಗುಜರಿಗೆ ಮಾರಿದ್ದಾರೆ. 7 ಸಾವಿರದ 200 ಕೆಜಿ ತೂಕದ ಬುಲ್ಡೊಜರ್ ಅನ್ನು ಕೆಜಿಗೆ 28 ರೂ.ನಂತೆ ಮಾರಾಟ ಮಾಡಿದ್ದಾರೆ.
ಭರತ್ ಮತ್ತು ಪವನ್ ಎಂಬ ಆರೋಪಿಗಳನ್ನು ಬಂಧಿಸಲಾಗಿದ್ದು, ಇಸ್ಮಾಯಿಲ್ ಎಂಬ ಗುಜರಿ ವ್ಯಾಪಾರಿಗೆ ಮಾರಾಟ ಮಾಡಿದ್ದರು.
ಸೆಲ್ವರಾಜ್ ಗುತ್ತಿಗೆ ಆಧಾರದಲ್ಲಿ ರಸ್ತೆ ಕಾಮಗಾರಿ ಕೆಲಸಕ್ಕಾಗಿ 5.50 ಲಕ್ಷ ರೂ. ನೀಡಿ ತಮಿಳುನಾಡಿನಿಂದ ಬೆಂಗಳೂರಿನ ಚಂದ್ರಾಲೇಔಟ್ ಗೆ ಬುಲ್ಡೊಜರ್ ತಂದಿದ್ದರು. ಲಾಕ್ ಡೌನ್ ಘೋಷಿಸಿದ ಹಿನ್ನೆಲೆಯಲ್ಲಿ ಕಳೆದ ಮೇ ನಲ್ಲಿ ತಮಿಳುನಾಡಿನ ತಿರುವಣ್ಣಾಮಲೈಗೆ ಸೆಲ್ವರಾಜ್ ಮರಳಿದ್ದರು.
ಲಾಕ್ ಡೌನ್ ನಿಂದಾಗಿ ಕಾಮಗಾರಿ ಸ್ಥಗಿತಗೊಂಡ ಹಿನ್ನಲೆಯಲ್ಲಿ ಸುಮಾರು 2 ವರ್ಷದಿಂದ ಬುಲ್ಡೊಜರ್ ಅನ್ನು ನಾಗರಭಾವಿ ಬಳಿಯ ನಿಲ್ಲಿಸಿದ್ದರು. ಜೂನ್ 12ರಂದು ಭರತ್ ಮತ್ತು ಪವನ್ ಬುಲ್ಡೋಜರ್ ಅನ್ನು ಕದ್ದೊಯ್ದಿದ್ದಾರೆ. ಜೂನ್ 16 ರಂದು ಸೆಲ್ವರಾಜ್ ಮರಳಿದಾಗ ಬುಲ್ಡೊಜರ್ ಕಳುವಾಗಿರೋದು ಪತ್ತೆಯಾಗಿದೆ.
ಸೆಲ್ವರಾಜ್ ಕೂಡಲೇ ಚಂದ್ರಾಲೇಔಟ್ ಠಾಣೆಯಲ್ಲಿ ಈ ಬಗ್ಗೆ ದೂರು ನೀಡಿದ್ದರು. ತನಿಖೆ ಕೈಗೆತ್ತಿಕೊಂಡ ಪೊಲೀಸರು ಬುಲ್ಡೋಜರ್ ಅನ್ನು ಮಾಗಡಿರಸ್ತೆಯ ಸೀಗೆಹಳ್ಳಿ ಬಳಿ ಆರೋಪಿಗಳು ಮಾರಾಟ ಮಾಡಿರುವುದನ್ನು ಪತ್ತೆಹಚ್ಚಿದ್ದಾರೆ.
ಬುಲ್ಡೊಜರ್ ಬಿಡಿಭಾಗಗಳನ್ನು ಬಿಚ್ಚಿ ಕಬ್ಬಿಣದ ರೀತಿ ರೀ ಸೇಲ್ ಮಾಡಲು ಇಸ್ಮಾಯಿಲ್ ಮುಂದಾಗಿದ್ದ ಎಂದು ತಿಳಿದು ಬಂದಿದ್ದು, ಇಸ್ಮಾಯಿಲ್ ನಾಪತ್ತೆಯಾಗಿದ್ದಾನೆ.