ಮಂಡ್ಯದ ರೈತರ ಜೀವನಾಡಿಯಾದ ಮೈಷುಗರ್ ಸಕ್ಕರೆ ಕಾರ್ಖಾನೆಯ ಖಾಸಗೀಕರಣಕ್ಕೆ ಗ್ರೀನ್ ಸಿಗ್ನಲ್ ನೀಡಿರುವ ರಾಜ್ಯ ಸರಕಾರ ಕೊವಿಡ್ ನಡುವೆಯೇ ಖಾಸಗಿ ಟೆಂಡರ್ ಕರೆಯಲು ಆದೇಶ ಹೊರಡಿಸಿದೆ.
ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಕಾರ್ಯದರ್ಶಿ ಬುಧವಾರ ಟೆಂಡರ್ ಪ್ರಕ್ರಿಯೆ ಆರಂಭಿಸಲು ಆದೇಶ ಹೊರಡಿಸಿದ್ದು, ಸರಕಾರಿ ಸ್ವಾಮ್ಯದಲ್ಲಿದ್ದ ರಾಜ್ಯದ ಏಕೈಕ ಸಕ್ಕರೆ ಕಾರ್ಖಾನೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಮೈಷುಗರ್ ಅನ್ನು 40 ವರ್ಷಗಳವರೆಗೆ ಗುತ್ತಿಗೆ ನೀಡಲಿದೆ.
ಕೆಲವು ವರ್ಷಗಳಿಂದ ಮುಚ್ಚಿದ್ದ ಕಾರ್ಖಾನೆಯನ್ನ ಸರ್ಕಾರಿ ಸ್ವಾಮ್ಯದಲ್ಲೇ ನಡೆಸುವಂತೆ ಒತ್ತಾಯ ಕೇಳಿಬಂದಿತ್ತು. ಹಲವು ಸುತ್ತಿನ ಮಾತುಕತೆಯಲ್ಲಿ ಖಾಸಗಿಗೆ ವಹಿಸದಂತೆ ರೈತ ಸಂಘಟನೆಗಳು ಸರ್ಕಾರವನ್ನು ಒತ್ತಾಯಿಸಿದ್ದವು.
ರೈತರ ಅಭಿಪ್ರಾಯ ಪಡೆದು ನಿರ್ಧಾರ ಕೈಗೊಳ್ಳುವುದಾಗಿದ್ದ ಹೇಳಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಈಗ ಏಕಾಏಕಿ ಕಾರ್ಖಾನೆ ಖಾಸಗೀಕರಣಕ್ಕೆ ಗ್ರೀನ್ ಸಿಗ್ನಲ್ ನೀಡಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಕೂಡಲೇ ನಿರ್ಧಾರ ಬದಲಿಸಿದಿದ್ದರೆ ಬೃಹತ್ ಹೋರಾಟ ರೂಪಿಸುವುದಾಗಿ ರೈತ ಸಂಘಟನೆಗಳು ಎಚ್ಚರಿಸಿವೆ.