ರುಚಿಯಾಗಿ ಚಿಕನ್ ಫ್ರೈ ಮಾಡಿಕೊಟ್ಟಿಲ್ಲ ಎಂದು ಪತ್ನಿಯನ್ನೇ ಹತ್ಯೆ ಮಾಡಿದ ಘಟನೆ ಬೆಂಗಳೂರು ಉತ್ತರ ತಾಲೂಕಿನ ತರಬನಹಳ್ಳಿ ಗ್ರಾಮದಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ. ಇದೀಗ ಆರೋಪಿ ಪತಿ ಮುಬಾರಕ್ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ.
ಆಗಸ್ಟ್ 18 ರಂದು ಪತ್ನಿಯನ್ನು ಪತಿಯೇ ಕೊಲೆ ಮಾಡಿದ್ದ. ಬಳಿಕ, ಚಿಕ್ಕಬಾಣಾವರ ಕೆರೆಗೆ ಎಸೆದಿದ್ದ. ಪತ್ನಿ ಶಿರೀನ್ ಬಾನು (25) ಎಂಬಾಕೆಯನ್ನು ಪತಿ ಮುಬಾರಕ್ ಕೊಲೆ ಮಾಡಿದ್ದ.
ಶಿರೀನ್ ಬಾನು ಹತ್ಯೆಗೈದು ಆಕೆಯ ಮೃತದೇಹವನ್ನು ಸ್ವತಃ ಪತಿಯೇ ಚಿಕ್ಕಬಾಣಾವರ ಕೆರೆಗೆ ಎಸೆದಿದ್ದ. ಈ ವಿಷಯ ತಿಳಿಯದೆ ಶಿರೀನ್ ಬಾನುಗಾಗಿ ಪೋಷಕರು ಹುಡುಕಾಟ ನಡೆಸಿದ್ದರು. ಬಳಿಕ, ಶಿರೀನ್ ಪತಿ ಮುಬಾರಕ್ ಮೇಲೆ ಪೋಷಕರಿಗೆ ಅನುಮಾನ ಉಂಟಾಗಿತ್ತು. ಹೀಗಾಗಿ ಮುಬಾರಕ್‌ನನ್ನು ಬಂಧಿಸಿ ವಿಚಾರಿಸುವಂತೆ, ಶಿರೀನ್ ಬಾನು ಪೋಷಕರು ಒತ್ತಡ ಹಾಕಿದ್ದರು. ಬಳಿಕ, ಇಂದು (ಆಗಸ್ಟ್ 23) ವಕೀಲರೊಂದಿಗೆ ಮುಬಾರಕ್ ಠಾಣೆಗೆ ಹಾಜರಾಗಿದ್ದಾರೆ. ಸೋಲದೇವನಹಳ್ಳಿ ಪೊಲೀಸರ ವಿಚಾರಣೆ ವೇಳೆ ಮುಬಾರಕ್ ತಪ್ಪೊಪ್ಪಿಗೆ ಮಾಡಿಕೊಂಡಿದ್ದಾನೆ.
ಮುಬಾರಕ್ (32) ಕೊಲೆ ಮಾಡಿದ ಪತಿ, ಆತ ಹಾಸಿಗೆ ವ್ಯಾಪಾರ ಮಾಡಿಕೊಂಡಿದ್ದ ಎಂದು ತಿಳಿದುಬಂದಿದೆ. ಎರಡು ವರ್ಷದ ಹಿಂದೆ ದಾವಣಗೆರೆಯಿಂದ ಬಂದು ಬೆಂಗಳೂರಿನಲ್ಲಿ ಜೀವನ ಸಾಗಿಸುತ್ತಿದ್ದರು. ಆದರೆ, ಗಂಡನ ಹೇಯಕೃತ್ಯದಿಂದ ಊಟದ ವಿಷಯವಾಗಿ ಮಡದಿಯ ಕೊಲೆ ನಡೆದಿದೆ ಎಂದು ತಿಳಿದುಬಂದಿದೆ.
ಗಂಡ ಮುಬಾರಕ್, ಶಿರೀನ್ರನ್ನು ದೊಣ್ಣೆಯಿಂದ ಹೊಡೆದು ಕೊಲೆ ಮಾಡಿ ಚಿಕ್ಕಬಾಣಾವರ ಕೆರೆಗೆ ಎಸೆದಿದ್ದ. ಮೃತ ದೇಹವನ್ನ ಬೈಕ್ ನಲ್ಲಿ ಸಾಗಿಸಿ ಕೆರೆಗೆ ಎಸೆದಿದ್ದ ಎಂದು ಮಾಹಿತಿ ಲಭ್ಯವಾಗಿದೆ. ಈಗ ಪೊಲೀಸರಿಂದ ಕೆರೆಯಲ್ಲಿ ಶವ ಹುಡುಕಾಡಲು ಸಿದ್ದತೆ ನಡೆಸಲಾಗಿದೆ. ಸೋಲದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.