ದಕ್ಷಿಣ ಕನ್ನಡ ಜಿಲ್ಲೆಯ ಕಡಬ ಪೊಲೀಸ್ ಠಾಣೆಯ ಸಿಬ್ಬಂದಿ ಶಿವರಾಜ್ ಎಂಬಾತನ ವಿರುದ್ದ ಅತ್ಯಾಚಾರದ ಆರೋಪ ಕೇಳಿಬಂದಿದೆ. ಅಲ್ಲದೇ ಬಾಲಕಿಯ ತಂದೆಯಿಂದ ಕಡಬ ಠಾಣೆಗೆ ಹಾಗೂ ನೀತಿ ತಂಡದಿಂದ ಮುಖ್ಯಮಂತ್ರಿಗಳಿಗೆ ದೂರು ಕೂಡಾ ನೀಡಲಾಗಿದೆ.
ಈ ಹಿಂದೆ ನಡೆದ ಪ್ರಕರಣವೊಂದರಲ್ಲಿ ಸಂತ್ರಸ್ಥೆಯಾಗಿದ್ದ ಅಪ್ರಾಪ್ತೆಯನ್ನು ತನ್ನ ಕಾಮದಾಟಕ್ಕೆ ಬಳಸಿಕೊಂಡಿದ್ದಆರೋಪ ಎದುರಿಸ್ತಿರೋ ಕಡಬ ಠಾಣೆಯ ಪೊಲೀಸ್ ಸಿಬ್ಬಂದಿ ಶಿವರಾಜ್ ವಿರುದ್ದ ಕೊನೆಗೂ ದೂರು ನೀಡಲಾಗಿದೆ. ಯುವತಿಯೇ ತಂದೆ ದೂರು ನೀಡಿದ್ದು ತನ್ನ ಮಗಳನ್ನು ಬಲತ್ಕಾರ ಮಾಡಿ ಅತ್ಯಾಚಾರ ಎಸಗಿ ಇದೀಗ ಗರ್ಭವತಿಯಾಗಲು ಕಾರಣನಾಗಿದ್ದು, ಗರ್ಭಪಾತ ನಡೆಸುವ ಸಲುವಾಗಿ ಯುವತಿಯನ್ನು ಮಂಗಳೂರಿನಲ್ಲಿ ಅಜ್ಞಾತ ಸ್ಥಳದಲ್ಲಿರಿಸಿದ್ದಾನೆ. ಅಲ್ಲದೆ ಗರ್ಭಪಾತ ನಡೆಸಲು ಹಣವನ್ನು ಕೂಡ ಪೋಲಿಸ್ ಸಿಬ್ಬಂದಿ ಶಿವರಾಜ್ ನೀಡಿದ್ದಾನೆ ಎಂದು ಅವರು ಯುವತಿಯ ತಂದೆ ದೂರಿನಲ್ಲಿ ವಿವರಿಸಿದ್ದಾರೆ. ಕಡಬ ಠಾಣೆಯ ಪೊಲೀಸ್ ಸಿಬ್ಬಂದಿ ಶಿವರಾಜ್ ಎಂಬಾತ ಯಾವುದೋ ದಾಖಲೆ, ಸಮನ್ಸ್ ನೀಡುವ ವಿಚಾರಕ್ಕೆ ಬಾಲಕಿಯ ಮನೆಗೆ ಹೋಗಿ ಪರಿಚಯ ಮಾಡಿಕೊಂಡಿದ್ದ.
ಪ್ರಕರಣ ಮುಗಿದಿದ್ದರೂ ಶಿವರಾಜ್ ಬೇರೆ ಬೇರೆ ನೆಪವೊಡ್ಡಿ ಮನೆಗೆ ಹೋಗುತ್ತಿದ್ನಂತೆ. ಇತ್ತೀಚಿಗೆ ಬಾಲಕಿಯ ದೈಹಿಕ ಬೆಳವಣಿಗೆಯಲ್ಲಿ ಏರುಪೇರಾಗಿ ಮಗಳು ಗರ್ಭೀಣಿ ಆಗಿರುವುದು ತಿಳಿದು ಬಂದಾಗ ಮನೆಯವ್ರು ಮಗಳನ್ನು ವಿಚಾರಿಸಿದಾಗ ಕಡಬ ಪೋಲಿಸ್ ಶಿವರಾಜ್ ಎಂಬಾತ ನನ್ನನ್ನು ಮದುವೆಯಾಗುವುದಾಗಿ ಹೇಳಿ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಆದುದರಿಂದ ನನಗೆ ಐದೂವರೆ ತಿಂಗಳು ಆಗಿದೆ ಎಂದು ಬಾಲಕಿ ಹೇಳಿದ್ದಳು. ಇನ್ನು ಈ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಬಾಲಕಿ ಜೊತೆಗೆ ತಾಯಿ ಕೂಡಾ ನಾಪತ್ತೆಯಾಗಿದ್ದಾರೆ.
ಈ ಮಧ್ಯೆ ಆರೋಪಿಯನ್ನು ಅಮಾನತುಗೊಳಿಸಿ, ಕ್ರಮ ಕೈಗೊಳ್ಳದಿದ್ದರೆ, ಉಗ್ರ ಹೋರಾಟ ನಡೆಸಲಾಗುವುದು. ಇನ್ನಾದರೂ ಕ್ರಮ ಕೈಗೊಳ್ಳಬಹುದಲ್ವೆ ಎಂದು ವಿ.ಹಿಂ.ಪ. ಜಿಲ್ಲಾ ಕಾರ್ಯದರ್ಶಿ ಭಾಸ್ಕರ ಧರ್ಮಸ್ಥಳ, ಕಡಬ ಪ್ರಖಂಡ ಅಧ್ಯಕ್ಷ ರಾಧಾಕೃಷ್ಣ , ಕಾರ್ಯದರ್ಶಿ ಪ್ರಮೋದ್ ರೈ ಅವರು ಎಚ್ಚರಿಸಿದ್ದಾರೆ. ಅಲ್ಲದೇ ಅತ್ತ ನೀತಿ ಸಾಮಾಜಿಕ ಸಂಘಟನೆ ಕಡೆಯಿಂದ ಕರ್ನಾಟಕ ಮುಖ್ಯಮಂತ್ರಿಗಳಿಗೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಇನ್ನೊಂದು ದೂರು ದಾಖಲಾಗಿದೆ.