ನಾನು ನಿನ್ನ ಮದುವೆಯಾಗೋದಿಲ್ಲ ಮದುವೆ ಆದ್ರೆ ಇಬ್ಬರಿಗೂ ತೊಂದರೆ ಅಂದ ಅಷ್ಟೇ ಆಗ್ಲೆ ಅಕೆಯ ಕೋಪ ನೆತ್ತಿಗೇರಿತ್ತು ಮುಂದೆ ಆಗಿದ್ದು ಮಾತ್ರ ಘೋರ ದುರಂತ. ಮದುವೆಯಾಗಲು ನಿರಾಕರಿಸಿದ ವ್ಯಕ್ತಿಯ ಮೈಮೇಲೆ ಆಕೆಯ ಪ್ರಿಯತಮೆ ಬಿಸಿ ನೀರು ಎರಚಿದ ಘಟನೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ನಡೆದಿದೆ.
ಕಲಬುರಗಿಯ ವಿಜಯಶಂಕರ ಆರ್ಯ ಗಾಯಾಳು. ಅಫಜಲಪುರ ಮೂಲದ ಜ್ಯೋತಿ ದೊಡ್ಡಮನಿ ಮಹಿಳೆ ಆರೋಪಿ.
ಚಾಮರಾಜಪೇಟೆಯ ಬೋರೋ ಕ್ಲಾತಿಂಗ್ ನಲ್ಲಿ ಎಡಿಟಿಂಗ್ ಕೆಲಸ ಮಾಡಿಕೊಂಡಿದ್ದ ವಿಜಯ್ ಶಂಕರನಿಗೆ ನಾಲ್ಕು ವರ್ಷಗಳ ಹಿಂದೆ ಪರಿಚಯವಾದ ಅಫಜಲಪುರದ ಜ್ಯೋತಿಯೊಂದಿಗೆ ಪ್ರೇಮಾಂಕುರವಾಗಿತ್ತು. ಎರಡು ವರ್ಷಗಳ ಹಿಂದೆ ಜ್ಯೋತಿಗೆ ಮದುವೆಯಾಗಿದೆ ಎಂಬ ವಿಚಾರ ತಿಳಿದ ಭೀಮಾಶಂಕರ ಆಕೆಯಿಂದ ಅಂತರ ಕಾಯ್ದುಕೊಂಡಿದ್ದ. ನಂತರ ಬೆಂಗಳೂರಿಗೆ ಬಂದು ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಕೆಲಸ ಮಾಡಿಕೊಂಡಿದ್ದ ಜ್ಯೋತಿಗೆ ತಾನು ವಾಸವಿದ್ದ ಚಾಮರಾಜಪೇಟೆಯ ಎಂ.ಡಿ.ಬ್ಲಾಕ್ ನಲ್ಲಿರುವ ಬಾಡಿಗೆ ರೂಮನ್ನ ಬಿಟ್ಟು ಕೊಟ್ಟಿದ್ದ. ಬಳಿಕ ತಾನು ಬೊಮ್ಮಸಂದ್ರ ಬಳಿಯ ಯಾರಂಡಳ್ಳಿಯಲ್ಲಿ ಸ್ನೇಹಿತನ ಜೊತೆಗೆ ವಾಸವಿದ್ದ. ಈ ನಡುವೆ ಮೇ 5ರಂದು ಬೇರೆ ಯುವತಿಯೊಂದಿಗೆ ಭೀಮಾಶಂಕರನ ಮದುವೆಯಾಗಿತ್ತು. ಪುನಃ ಬೆಂಗಳೂರಿಗೆ ಬಂದಿದ್ದ ವಿಜಯಶಂಕರನನ್ನ ಸಂಜೆ ತನ್ನ ಬರ್ತ್ ಡೇ ಸಿದ್ಧತೆಗೆ ಸಹಾಯ ಮಾಡುವಂತೆ ಜ್ಯೋತಿ ತನ್ನ ರೂಮಿಗೆ ಕರೆಸಿಕೊಂಡಿದ್ದಳು. ಸಂಜೆ ಏಳು ಗಂಟೆ ಸುಮಾರಿಗೆ ರೂಮಿಗೆ ಬಂದಿದ್ದ ವಿಜಯಶಂಕರ ‘ಇಬ್ಬರಿಗೂ ಮದುವೆಯಾಗಿದೆ ಇನ್ನುಮುಂದೆ ಸಿಗುವುದು ಬೇಡ’ ಎಂದಿದ್ದ. ಬಳಿಕ ಸುಮಾರು ಒಂದು ಗಂಟೆಗಳ ಕಾಲ ತನ್ನ ಪತ್ನಿ, ಹಾಗೂ ಪೋಷಕರೊಂದಿಗೆ ಫೋನ್ ನಲ್ಲಿ ಮಾತನಾಡಿದ್ದ. ಇದನ್ನ ಕೇಳಿಸಿಕೊಂಡಿದ್ದ ಜ್ಯೋತಿ ಸಿಟ್ಟಿಗೆದ್ದಿದ್ದಳು. ಬಳಿಕ ತನಗೆ ಮೈ ಹುಷಾರಿಲ್ಲ, ಡ್ರಿಪ್ಸ್ ಹಾಕು ಎಂದಿದ್ದ ವಿಜಯಶಂಕರನಿಗೆ ಆರೋಪಿಯೇ ಡ್ರಿಪ್ಸ್ ಹಾಕಿದ್ದಳು. ಬಳಿಕ ವಿಜಯಶಂಕರ ನಿದ್ರೆಗೆ ಜಾರಿದ್ದ.
ಬೆಳಗ್ಗಿನ ಜಾವ ಸೈಲೆಂಟಾಗಿ ಅಡುಗೆ ಕೋಣೆಯಲ್ಲಿ ಬಿಸಿ ನೀರು ಕಾಯಿಸಿ ತಂದ ಆರೋಪಿ ಭೀಮಾಶಂಕರನ ಮೈಮೇಲೆ ಎರಚಿದ್ದಾಳೆ. ಬಳಿಕ ಬಿಯರ್ ಬಾಟಲ್ ನಿಂದ ಆತನ ಮುಖಕ್ಕೆ ಹೊಡೆದು ಮನೆ ಲಾಕ್ ಮಾಡಿಕೊಂಡು ಸ್ಥಳದಿಂದ ಕಾಲ್ಕಿತ್ತಿದ್ದಾಳೆ. ತೀವ್ರ ಗಾಯಗಳಿಂದ ಕಿರುಚಾಡುತ್ತಿದ್ದ ಭೀಮಾಶಂಕರನನ್ನ ಮನೆ ಮಾಲೀಕ ಸೈಯದ್ ಗಮನಿಸಿ ವಿಕ್ಟೋರಿಯಾ ಅಸ್ಪತ್ರೆಗೆ ದಾಖಲಿಸಿದ್ದಾರೆ. ಬಿಸಿ ನೀರು ಬಿದ್ದು ಶೇಕಡಾ 40-50 ರಷ್ಟು ಗಾಯಗೊಂಡಿರುವ ವಿಜಯಶಂಕರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಗಾಯಾಳುವಿನ ಹೇಳಿಕೆಯನ್ವಯ ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಆರೋಪಿ ಮಹಿಳೆಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.
ವರದಿ : ನ್ಯಾನಪ್ಪನಹಳ್ಳಿ ಆರ್ ವೆಂಕಟೇಶ್