ಢಾಕಾ: ಬಾಂಗ್ಲಾದಲ್ಲಿ ಕೊರೋನಾ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿವೆ. ಹೀಗಾಗಿ ಸರ್ಕಾರ ಏಳು ದಿನಗಳ ಲಾಕ್ಡೌನ್ ವಿಧಿಸಿ ಆದೇಶಿಸಲಾಗಿದೆ. ಏಪ್ರಿಲ್ 5ರಿಂದ ಲಾಕ್ ಡೌನ್ ಜಾರಿ ಮಾಡಲು ಸರ್ಕಾರ ನಿರ್ಧರಿಸಿದೆ ಎಂದು ತಿಳಿದುಬಂದಿದೆ. ಲಾಕ್ ಡೌನ್ ಸಂದರ್ಭದಲ್ಲಿ ಕೇವಲ ತುರ್ತು ಸೇವೆಗಳಿಗೆ ಮಾತ್ರ ಅವಕಾಶ ನೀಡಲಾಗುತ್ತದೆ ಎಂದು ಮೂಲಗಳು ಮಾಹಿತಿ ನೀಡಿವೆ.
ಲಾಕ್ಡೌನ್ ಸಂದರ್ಭದಲ್ಲಿ ಎಲ್ಲ ವಾಣಿಜ್ಯ ಚಟುವಟಿಕೆಗಳು ರೈಲು, ಬಸ್ ಸಂಚಾರ ಬಂದ್ ಆಗಲಿದ್ದು, ಶಾಲಾ-ಕಾಲೇಜುಗಳು ಮುಚ್ಚಲಿವೆ. ಇಡೀ ದೇಶ ಅಘೋಷಿತ ಬಂದ್ಗೆ ಒಳಪಡಲಿದೆ.
ಬಾಂಗ್ಲಾದೇಶದಲ್ಲಿ ಕೊರೊನಾ 2ನೇ ಅಲೆಯ ಅಬ್ಬರ ಹೆಚ್ಚಾಗಿದ್ದು, ಸೋಂಕು ತಡೆಗೆ ಕಠಿಣ ಕ್ರಮಗಳನ್ನು ಜಾರಿಗೊಳಿಸಲಾಗಿದೆ. ಸೋಂಕನ್ನು ಪರಿಣಾಮಕಾರಿಯಾಗಿ ತಡೆಯಲು ಲಾಕ್ಡೌನ್ ಅನಿವಾರ್ಯ ಎಂಬುದನ್ನು ಜನರಿಗೆ ಮನದಟ್ಟು ಮಾಡಿ ಲಾಕ್ಡೌನ್ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಬಾಂಗ್ಲಾ ಪ್ರಧಾನಿ ತಿಳಿಸಿದ್ದಾರೆ. ಭಾರತದಲ್ಲಿಯೂ ಕೊರೋನಾ ಪ್ರಕರಣಗಳು ಹೆಚ್ಚುತ್ತಿದ್ದು, ಕೆಲವು ರಾಜ್ಯಗಳು ಸೋಂಕು ಹೆಚ್ಚಿರುವ ಪ್ರದೇಶಗಳಲ್ಲಿ ಲಾಕ್ಡೌನ್ ವಿಧಿಸಿವೆ.