ಗೌಹಾಟಿ: ಪಂಚರಾಜ್ಯಗಳ ವಿಧಾನಸಭಾ ಚುನಾವಣೆಗೆ ಭರ್ಜರಿ ಪ್ರಚಾರ ನಡೆದಿದೆ. ಅಸ್ಸಾಂನ ತಮುಲ್ಪುರದಲ್ಲಿ ನಡೆದ ಪ್ರಚಾರ ಸಮಾವೇಶದಲ್ಲಿ ಪ್ರಧಾನಿ ಮೋದಿ ಪಾಲ್ಗೊಂಡಿದ್ದರು. ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಬಿಜೆಪಿ ಸರ್ಕಾರ ಯಾವುದೇ ರೀತಿಯ ತಾರತಮ್ಯ ಮಾಡದೇ ದೇಶದ ಜನರಿಗಾಗಿ ಸೇವೆ ಸಲ್ಲಿಸುತ್ತದೆ ಎಂದಿದ್ದಾರೆ.
ಮತಬ್ಯಾಂಕ್ಗಾಗಿ ದೇಶವನ್ನು ವಿಭಜಿಸುವುದನ್ನೇ ಕೆಲವರು ಜಾತ್ಯಾತೀತತೆ ಎನ್ನುತ್ತಿದ್ದಾರೆ. ದೇಶ ವಿಭಜಿಸುವುದೇ ಕೆಲವರ ಪ್ರಕಾರ ಜಾತ್ಯಾತೀತತೆ ಎಂಎದು ವಿಪಕ್ಷಗಳ ಮೇಲೆ ಹರಿಹಾಯ್ದಿದ್ದಾರೆ.
ಕೇಂದ್ರ ಬಜೆಟ್ನಲ್ಲಿ ಅಸ್ಸಾಂನಲ್ಲಿ ಟೀ ಗಾರ್ಡನ್ ರೂಪಿಸಲು 1,000 ಕೋಟಿ ಮೀಸಲಿಡಲಾಗಿದೆ. ಎಲ್ಲರ ಜೊತೆಯಲ್ಲಿ ಎಲ್ಲರ ಅಭಿವೃದ್ಧಿ ಎಲ್ಲರ ವಿಶ್ವಾಸ ಎಂಬುದು ನಮ್ಮ ಮಂತ್ರವಾಗಿದೆ. ಅಸ್ಸಾಂನ ಒಪ್ಪಂದವನ್ನು ಸಂಪೂರ್ಣವಾಗಿ ಕಾರ್ಯಗತಗೊಳಿಸಲು ಕೇಂದ್ರವು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿದೆ. ನಮ್ಮದು ಜನಪರ ಸರ್ಕಾರ ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಅಸ್ಸಾಂನಲ್ಲಿ ಮೂರು ಹಂತದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಈಗಾಗಲೇ ಎರಡು ಹಂತದ ಮತದಾನ ಪ್ರಕ್ರಿಯೆ ಮುಗಿದಿದ್ದು ಇನ್ನೂ ಒಂದು ಹಂತದ ಮತದಾನ ಬಾಕಿಯಿದೆ. ಮೇ.2ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.