ಭೋಪಾಲ್: ದೇಶಾದ್ಯಂತ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿವೆ. ಈ ಹಿನ್ನೆಲೆಯಲ್ಲಿ ಮಧ್ಯಪ್ರದೇಶ ಸರ್ಕಾರ ರಾಜ್ಯಾದ್ಯಂತ ಏ.9ರಿಂದ ಏ.12ರವರೆಗೆ ಲಾಕ್ಡೌನ್ ವಿಧಿಸಿ ಆದೇಶಿಸಿದೆ.
ಮಧ್ಯಪ್ರದೇಶದಲ್ಲಿ ಕೋವಿಡ್ ಎರಡನೇ ಅಲೆ ಸಾಕಷ್ಟು ಆತಂಕ ಸೃಷ್ಟಿಸಿದೆ. ಹೀಗಾಗಿ ಸೋಂಕು ನಿಯಂತ್ರಣಕ್ಕೆ ಕಠಿಣ ಮಾರ್ಗಸೂಚಿಗಳನ್ನು ಹೊರಡಿಸಲಾಗಿತ್ತು. ಆದರೂ ಸೋಂಕು ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗಿದೆ.
ಇನ್ನು, ಮಧ್ಯಪ್ರದೇಶದಲ್ಲಿ ಗಣನೀಯವಾಗಿ ಹೆಚ್ಚುತ್ತಿರುವ ಹಿನ್ನೆಲಯಲ್ಲಿ ವಾರದಲ್ಲಿ 5 ದಿನಗಳು ಸರ್ಕಾರಿ ಕಚೇರಿಗಳು ಕಾರ್ಯನಿರ್ವಹಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಮುಖ್ಯಮಂತ್ರಿ ಶಿವರಾಜ್ ಸಿಂಗ ಚೌಹಾಣ್ ಹೇಳಿದ್ದಾರೆ. ಸೋಮವಾರದಿಂದ ಶುಕ್ರವಾರದವರೆಗೂ ಕಚೇರಿ ಕೆಲಸಗಳು ನಡೆಯಲಿವೆ ಎಂದು ಅವರು ತಿಳಿಸಿದ್ದಾರೆ.
ಮಧ್ಯಪ್ರದೇಶ, ಮಹಾರಾಷ್ಟ್ರ, ಕರ್ನಾಟಕ, ಪಂಜಾಬ್ ಸೇರಿದಂತೆ ದೇಶದ ಒಟ್ಟು 11 ರಾಜ್ಯಗಳಲ್ಲಿ ಕೋವಿಡ್ ಸೋಂಕು ಪ್ರಕರಣಗಳು ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಈ ಸಂಬಂಧ ಇಂದು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಡನೆ ಪ್ರಧಾನಿ ನರೇಂದ್ರ ಮೋದಿ ಸಮಾಲೋಚನೆ ನಡೆಸಲಿದ್ದಾರೆ.
ಕೋವಿಡ್ ಸೋಂಕು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಇಂದು ಸಂಜೆ 6.30ಕ್ಕೆ ವಿಡಿಯೋ ಕಾನ್ಫರನ್ಸ್ ಮೂಲಕ ಸಭೆ ನಡೆಯಲಿದೆ.