ಬೆಂಗಳೂರು: ನಮ್ಮೆಲ್ಲರಿಗೆ ಅರಿಶಿಣ ಚಿರಪರಿಚಿತ. ಅರಿಶಿಣದ ಬಳಕೆಯಿಂದಲೇ ನಾವೆಲ್ಲ ಬೆಳೆದು ದೊಡ್ಡವರಾದವರು. ಅನಾದಿ ಕಾಲದಿಂದಲೂ ಬಳಸುತ್ತಿದ್ದ ಪರಂಪರಾಗತ ಔಷಧಿಯುಕ್ತ ಗಿಡಮೂಲಿಕೆ. ಅರಿಶಿಣದ ನೀರನ್ನು ಚಿನ್ನದ ನೀರೆಂತಲೇ ಕರೆಯುತ್ತಾರೆ.
ಆಹಾರದಲ್ಲಿ ಅರಿಶಿಣವನ್ನು ಬಳಸುವುದರಿಂದ ನಮ್ಮ ಆರೋಗ್ಯಕ್ಕೆ ಬಲು ಉಪಕಾರಿ. ಅರಿಶಿಣ ಸೌಭಾಗ್ಯದ ಜೊತೆಗೆ ಆರೋಗ್ಯವನ್ನೂ ತರುತ್ತದೆ. ಅರಿಶಿಣವಿಲ್ಲದ ನಮ್ಮ ಅಡುಗೆ ಅಪೂರ್ಣವೆನಿಸುತ್ತದೆ. ಭಾರತ ಮಾತ್ರವಲ್ಲದೇ ವಿದೇಶಗಳಲ್ಲಿಯೂ ಅರಿಶಿಣವನ್ನು ಔಷಧೀಯ ಗುಣಗಳಿಗಾಗಿ ಬಳಸಲು ಆರಂಭಿಸಿದ್ದಾರೆ.
ಮನುಷ್ಯನ ದೇಹಕ್ಕೆ ಅಗತ್ಯವಾಗಿ ಬೇಕಾದ ಖನಿಜಾಂಶಗಳಾದ ತಾಮ್ರ, ಕಬ್ಬಿಣ, ಕ್ಯಾಲ್ಸಿಯಂ, ಪ್ರೋಟೀನ್, ಮೆಗ್ನೀಷಿಯಂ, ಜಿಂಕ್ ಮತ್ತು ಡಯೆಟರಿ ಫೈಬರ್ ಅಥವಾ ನಾರಿನ ಅಂಶ ಹೆಚ್ಚಾಗಿ ಸೇರಿಕೊಂಡಿದೆ. ವಿಟಮಿನ್ ಗಳಾದ ವಿಟಮಿನ್ ‘ ಸಿ ‘, ವಿಟಮಿನ್ ‘ ಇ ‘, ಮತ್ತು ವಿಟಮಿನ್ ‘ ಕೆ ‘ ಅಂಶಗಳು ಅರಿಶಿನದಲ್ಲಿ ಯಥೇಚ್ಛವಾಗಿವೆ.
ಚರ್ಮದ ಕಾಯಿಲೆಗಳಿಗೆ ಮತ್ತು ಮೊಡವೆ ಗುಳ್ಳೆಗಳಿಗೆ ಅರಿಶಿಣ ರಾಮಬಾಣವಾಗಿ ಉಪಯೋಗಕ್ಕೆ ಬರುತ್ತದೆ. ಸುಂದರವಾದ, ನಯವಾದ ಮತ್ತು ಆರೋಗ್ಯಕರವಾದ ಚರ್ಮ ನಿಮ್ಮದಾಗಬೇಕೆಂದರೆ 1/ 3 ಟೇಬಲ್ ಚಮಚದಷ್ಟು ಅರಿಶಿನವನ್ನು ಅಷ್ಟೇ ಪ್ರಮಾಣದ ಹಸಿ ಜೇನು ತುಪ್ಪದೊಂದಿಗೆ ಚೆನ್ನಾಗಿ ಕಲಸಿ ಪೇಸ್ಟ್ ನ ರೀತಿಯಲ್ಲಿ ತಯಾರಿಸಿ ಅದನ್ನು ಚರ್ಮಕ್ಕೆ ತೊಂದರೆಯಾಗಿರುವ ಜಾಗದಲ್ಲಿ ಹಚ್ಚಬೇಕು. ಹೀಗೆ ಮಾಡುತ್ತಾ ಬಂದರೆ ಚರ್ಮ ಸಂಬಂಧಿತ ಯಾವುದೇ ಸಮಸ್ಯೆಗಳು ಸುಲಭವಾಗಿ ಬಗೆಹರಿಯುತ್ತವೆ.
ಮೂಳೆಗಳ ದೃಢತೆಗೆ ಅರಿಶಿಣದ ಹಾಲು ಸಹಕಾರಿಯಾಗುತ್ತದೆ. ಇದು ಮೂಳೆಗಳನ್ನು ಬಲವಾಗಿ ಇರಿಸಿಕೊಳ್ಳಲು ಸಹಾಯ ಮಾಡುವ ಕ್ಯಾಲ್ಸಿಯಂನ ಉತ್ತಮ ಮೂಲವಾಗಿದೆ. ಮಹಿಳೆಯರಲ್ಲಿ ಮಾಸಿಕ ದಿನಗಳಲ್ಲಿ ಕಾಡುವ ಕೆಳಹೊಟ್ಟೆ ನೋವು ಮೊದಲಾದ ಎಲ್ಲಾ ಸಮಸ್ಯೆಗಳಿಗೆ ಅರಿಶಿನದ ಹಾಲು ಸಹಾಯ ಮಾಡುತ್ತದೆ.
ಅರಿಶಿಣ ಹಾಲು ಬ್ಯಾಕ್ಟೀರಿಯಾದ ಸೋಂಕುಗಳು ಮತ್ತು ವೈರಸ್ ಸೋಂಕುಗಳು ದೇಹವನ್ನು ಆಕ್ರಮಿಸುವುದನ್ನು ವಿರೋಧಿಸುತ್ತದೆ. ಅಲ್ಲದೇ, ಸೇವಿಸುವುದರಿಂದ ಉಸಿರಾಟ ಸಂಬಂಧಿ ತೊಂದರೆಗಳು ಮತ್ತು ಸೈನಸ್ ಸಮಸ್ಯೆಗಳು ನಿವಾರಣೆಯಾಗುತ್ತದೆ.