ಬೆಂಗಳೂರು: ಜನರಿಗೆ ಮಾತು ಕೊಟ್ಟಂತೆ ಸರ್ಕಾರ ನಡೆದುಕೊಂಡಿಲ್ಲ. ನಾನು ಉಪ ಚುನಾವಣೆ ಕ್ಷೇತ್ರ ಸೇರಿದಂತೆ ರಾಜ್ಯ ಪ್ರವಾಸ ಮಾಡಿದ್ದೇನೆ. ಎಲ್ಲ ಕಡೆ ಬದಲಾವಣೆ ತರಬೇಕು ಎಂದು ಜನರಿಂದ ಅಭಿಪ್ರಾಯ ವ್ಯಕ್ತವಾಗುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದ್ದಾರೆ.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜನರಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಮೇಲೆ ಬಹಳಷ್ಟು ಸಿಟ್ಟು ಇದೆ. ಇದನ್ನೆಲ್ಲಾ ನೋಡಿದರೆ ನಾವು ಮೂರು ಕ್ಷೇತ್ರಗಳಲ್ಲೂ ಗೆಲ್ಲುತ್ತೇವೆ. ಈ ಚುನಾವಣೆಯಲ್ಲಿ ಹಣದಿಂದ, ಸರ್ಕಾರಿ ನೌಕರರನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ. ಜಾತಿ ಸಭೆ ಮಾಡ್ತಿರುವ ಸಿಎಂ ಮೇಲೆ ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗಕ್ಕೆ ನಾನು ಮನವಿ ಮಾಡುತ್ತೇನೆ ಎಂದು ಆಗ್ರಹಿಸಿದರು.
ಸಾರಿಗೆ ನೌಕರರ ಮುಷ್ಕರ ವಿಚಾರವಾಗಿ ಮಾತನಾಡಿದ ಅವರು, ಸಾರಿಗೆ ನೌಕರರ ನೋವಿನ ಬಗ್ಗೆ ಸರ್ಕಾರ ಕರೆದು ಚರ್ಚಿಸಬೇಕು. ಆದರೆ, ಯಾಕೆ ಈಗ ಸರ್ಕಾರಕ್ಕೆ ಪ್ರತಿಷ್ಠೆ ಬಂದಿದೆ. ಮಂತ್ರಿಯೊಬ್ಬರು ಯಾವ ಕಾರಣಕ್ಕೂ ನಾವು ಮಾತನಾಡುವುದಿಲ್ಲ ಎಂದಿದ್ದಾರೆ. ಅವರು ಖಾಸಗೀಕರಣ ಮಾಡಲು ಹೊರಟಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಸಾರಿಗೆ ನೌಕರರ ನೋವು ಕೇಳಿ, ಸಮಸ್ಯೆ ಬಗೆಹರಿಸುವ ಕೆಲಸವನ್ನ ಸರ್ಕಾರ ಮಾಡಬೇಕು ಆದರೆ, ಈಗ ಮತ್ತೆ ಖಾಸಗೀಕರಣ ಮಾಡುವ ಒಳಸಂಚು ನಡೆದಿರುವ ಅನುಮಾನವಿದೆ. ಸಾರಿಗೆ ಖಾಸಗೀಕರಣ ಒಳ್ಳೆಯದಲ್ಲ,ಜನರ ಅನುಕೂಲ ನೋಡಿಕೊಳ್ಳಿ, ಹಬ್ಬದ ಸಂದರ್ಭದಲ್ಲಿ ಜನ ಊರುಗಳಿಗೆ ತೆರಳಬೇಕು, ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಿ, ಸಾರಿಗೆ ಸಿಬ್ಬಂದಿಗಳ ಬಾಕಿ ಸಂಬಳವನ್ನ ನೀಡಿ. ಸಾರಿಗೆ ನೌಕರರ ಪರವಾಗಿ ನಮ್ಮ ಪಕ್ಷ ಇರಲಿದೆ ಎಂದರು.
ಇನ್ನೂ ದಿನಕ್ಕೊಂದು ತಿರುವು ಪಡೆಯುತ್ತಿರುವ ಸಿಡಿ ಲೇಡಿ ವಿಚಾರವಾಗಿ ಎಲ್ಲವನ್ನೂ ನಾವು ಗಮನಿಸ್ತಿದ್ದೇವೆ. ನೀವು ಏನು ಮಾಡ್ತಿದ್ದೀರಿ, ಅಧಿಕಾರಿಗಳು ಏನು ಮಾಡುತ್ತಿದ್ದಾರೆ. ಆಸ್ಪತ್ರೆಯಲ್ಲಿ ಏನಾಗ್ತಿದೆ.? ಡಾಕ್ಟರ್ ಏನು ಮಾಡ್ತಿದ್ದಾರೆ. ಪಿಪಿಇ ಕಿಟ್ ಯಾರು ಹಾಕ್ಕೊಂಡು ಎಲ್ಲಿ ಮಲಗಿದ್ದಾರೆ, ಯಾರು ಪೇಷಂಟು, ಅಧಿಕಾರಿಗಳು ಯಾವ ಆ್ಯಂಗಲ್ ನಲ್ಲಿ ತೆಗೆದುಕೊಂಡು ಹೋಗ್ತಿದ್ದಾರೆ. ಎಲ್ಲವನ್ನೂ ಗಮನಿಸ್ತಿದ್ದೀನಿ ಆದರೆ ಎಲ್ಲಾದಕ್ಕೂ ಟೈಮ್ ಬರಲಿ ಮಾತನಾಡುತ್ತೇನೆ ಎಂದು ತಿಳಿಸಿದರು.