ವಿಶ್ವದ ಅತ್ಯಂತ ದೊಡ್ಡ ಹಾಗೂ ದಟ್ಟ ಕಾಡು ಅಮೆಜಾನ್ ಗೆ ಭೇಟಿ ನೀಡಿದ್ದ ಮಹಿಳೆಯ ಕಣ್ಣಿನಿಂದ 3 ಹುಳುಗಳನ್ನು ದೆಹಲಿ ವೈದ್ಯರು ಹೊರತೆಗೆದಿದ್ದಾರೆ.
ಅಮೆಜಾನ್ ಕಾಡುಗಳಿಗೆ ಇತ್ತೀಚೆಗೆ ಭೇಟಿ ನೀಡಿ ಮರಳಿದ್ದ 32 ವರ್ಷದ ಮಹಿಳೆ ಕಣ್ಣಿನಲ್ಲಿ ನೋವು ಕಾಣಿಸಿಕೊಂಡಿದ್ದರಿಂದ ತಪಾಸಣೆಗೆ ಆಗಮಿಸಿದ್ದರು.
ಕಣ್ಣಿನಲ್ಲಿ ಸಮಸ್ಯೆ ಅರಿತು ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರು 2 ಸೆಂಟಿಮೀಟರ್ ಉದ್ದದ 2 ಜೀವಂತ ಹುಳುಗಳನ್ನು ಹೊರತೆಗೆದಿದ್ದಾರೆ.
ಮಹಿಳೆ ತನ್ನ ಬಲಗಣ್ಣಿನ ಕಣ್ಣಿನ ಗುಡ್ಡೆಯ ಮೇಲೆ ನೋವು ಕಾಣಿಸಿಕೊಳ್ಳುತ್ತಿರುವುದಾಗಿ ವೈದ್ಯರ ಬಳಿ ಹೇಳಿಕೊಂಡಿದ್ದರು. ಅಲ್ಲದೇ ಕಣ್ಣಿನ ಒಳಭಾಗದಲ್ಲಿ ಯಾವುದೇ ವಸ್ತು ಚಲಿಸುತ್ತಿರುವ ಅನುಭವ ಆಗುತ್ತಿರುವುದಾಗಿ ಹೇಳಿಕೊಂಡಿದ್ದರು. ಸಮಸ್ಯೆ ಗಂಭೀರವಾಗಿರುವುದನ್ನು ಪತ್ತೆ ಹಚ್ಚಿದ ದೆಹಲಿಯ ಖಾಸಗಿ ವೈದ್ಯರು ಐಸಿಯುನಲ್ಲಿ ದಾಖಲಿಸಿಕೊಂಡು ಶಸ್ತ್ರಚಿಕಿತ್ಸೆಗೆ ಒಳಪಡಿಸಿದರು.
ಇದಕ್ಕೂ ಮೊದಲು ಮಹಿಳೆ ಅಮೆರಿಕದಲ್ಲಿ ಸಮಸ್ಯೆ ಹೇಳಿಕೊಂಡಾಗ ತಪಾಸಣೆ ಮಾಡಿದ ಅಲ್ಲಿನ ವೈದ್ಯರು ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿ ಸಾಮಾನ್ಯ ಮಾತ್ರೆಗಳನ್ನು ನೀಡಿ ಡಿಸ್ಚಾರ್ಜ್ ಮಾಡಿ ಕಳುಹಿಸಿದ್ದರು.
ಈ ರೀತಿಯ ಸಮಸ್ಯೆಗಳು ತುಂಬಾ ಅಪರೂಪ. ಆದ್ದರಿಂದ ಇಂತಹ ಸಮಸ್ಯೆಗಳನ್ನು ಕೂಡಲೇ ಸಮಗ್ರ ತಪಾಸಣೆ ಮಾಡಿ ಚಿಕಿತ್ಸೆ ನೀಡಬೇಕಾಗಿದೆ ಎಂದು ಡಾ.ಮೊಹಮದ್ ನದೀಂ ತಿಳಿಸಿದ್ದಾರೆ.