ಬೆಂಗಳೂರು: ಕೊರೊನಾ ತನ್ನ ರಣಕೇಕೆ ಮುಂದುವರೆಸಿದೆ. ಇತ್ತ ಜನರು ವ್ಯಾಕ್ಸಿನ್ಗಾಗಿ ಪರದಾಡುತ್ತಿದ್ದಾರೆ. ಆದರೆ ಲಸಿಕೆ ಸಿಗುತ್ತಿಲ್ಲ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ವ್ಯಾಕ್ಸಿನ್ ಒದಗಿಸಿ ಎಂದು ಕೋರ್ಟ್ ಹೇಳುತ್ತೆ. ಆದರೆ, ಸಾಕಷ್ಟು ಪ್ರಮಾಣದಲ್ಲಿ ವ್ಯಾಕ್ಸಿನ್ ಪ್ರೊಡಕ್ಷನ್ ಆಗಲಿಲ್ಲವೆಂದ್ರೆ ನಾವೇನು ನೇಣುಹಾಕಿಕೊಳ್ಳಬೇಕಾ ಎಂದು ಕೇಂದ್ರ ಸಚಿವ ಡಿ ವಿ ಸದಾನಂದಗೌಡ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಎಲ್ಲಾ ಪ್ರಯತ್ನಗಳನ್ನು ಪ್ರಮಾಣಿಕವಾಗಿ ಮಾಡುತ್ತಿದೆ. ಎಲ್ಲಾ ರಾಜ್ಯಗಳ ಜತೆ ನಿರಂತರ ಸಂಪರ್ಕ ಇಟ್ಟುಕೊಳ್ಳಲಾಗಿದೆ. ನಿರಂತರವಾಗಿ ಸಮಾಲೋಚನೆ ಮಾಡಿ ಪ್ರಧಾನಿ ನರೇಂದ್ರ ಮೋದಿಯವರು ಎಲ್ಲಾ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ ಎಂದರು.
ಇನ್ನೂ ಪ್ರತಿಭಟನೆ ಮಾಡುವುದರಿಂದ ಕೊರೊನಾ ಹೋಗುತ್ತೆ ಎಂದರೆ ಬೀದಿಯಲ್ಲಿ ಪ್ರತಿಭಟನೆ ಮಾಡಿ. ನಮ್ಮ ಪ್ರಧಾನಿಗಳು ಯಾವುದೇ ಮೂಲೆಯಿಂದ ಒಂದೊಳ್ಳೆ ಸಲಹೆ ಬಂದರೂ ಸ್ವೀಕರಿಸಿ ಎಂದಿದ್ದಾರೆ. ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ಅವರೇ ನೀವು ಹೀಗೆ ಪ್ರತಿಭಟನೆ ಮಾಡುವ ಬದಲು, ನಿಯೋಗ ಹೊತ್ತೊಯ್ದು ಮುಖ್ಯಮಂತ್ರಿ ಹಾಗೂ ಆರೋಗ್ಯ ಸಚಿವರ ಜೊತೆ ಕುಳಿತು ಮಾತನಾಡಿ ಎಂದು ವಾಗ್ದಾಳಿ ನಡೆಸಿದರು.
ಅಲ್ಲದೇ ಮಹಾರಾಷ್ಟ್ರ ಕರ್ನಾಟಕ ಮತ್ತು ಉತ್ತರ ಪ್ರದೇಶಕ್ಕೆ ಆಮ್ಲಜನಕ ಪೂರೈಕೆಯಲ್ಲಿ ಹೆಚ್ಚು ವ್ಯತ್ಯಾಸವಿಲ್ಲ. 850 ಮೆಟ್ರಿಕ್ ಟನ್ ಆಸುಪಾಸಿನಲ್ಲೇ ಆಕ್ಸಿಜನ್ ಪೂರೈಕೆ ಮಾಡಲಾಗಿದೆ. ನಾವು ಜಗಳ ಮಾಡಿ ಸಕ್ರಿಯ ಪ್ರಕರಣಗಳ ಆಧಾರದ ಮೇಲೆ ಕರ್ನಾಟಕಕ್ಕೆ ಹೆಚ್ಚು ಪೂರೈಕೆ ಮಾಡುವಂತೆ ಮಾಡಿದ್ದೇವೆ ಎಂದು ತಿಳಿಸಿದರು.
ಮಹಾರಾಷ್ಟ್ರ ಬಿಟ್ಟರೆ ಕರ್ನಾಟಕಕ್ಕೆ ಅತಿ ಹೆಚ್ಚು ಪ್ರಮಾಣದಲ್ಲಿ ರೆಮಿಡೆಸಿವಿರ್ ಮತ್ತು ಟ್ರಸ್ಲಿಜೋಂ, ಆಂಪಿಟೋರೆಸಿಯನ್ ಇಂಜೆಕ್ಷನ್ ಗಳನ್ನು ಸರಬರಾಜು ಮಾಡಿದ್ದೇವೆ. ಟ್ರಸ್ಲಿಜೋಂ ಔಷಧಕ್ಕೂ ಹೆಚ್ಚು ಬೇಡಿಕೆ ಇದೆ. ಪ್ರತಿ ಇಂಜೆಕ್ಷನ್ ಗೆ 34 ಸಾವಿರ ದರವಿದೆ. ಈ ಇಂಜೆಕ್ಷನ್ ಮೂಲ ಉತ್ಪಾದಕರು 50 ಸಾವಿರ ಡೋಸ್ ಡೊನೇಟ್ ಮಾಡಿದರು ಎಂದು ಹೇಳಿದರು.