ಹೈದರಾಬಾದ್: ನರ್ಸಿಂಗ್ ಓದುತ್ತಿದ್ದ ಸಿರಿಶಾ ತನ್ನ ತಾಯಿ ಹೃದಯಾಘಾತದಿಂದ ಆಸ್ಪತ್ರೆ ಸೇರಿದ್ದರಿಂದಾಗಿ ಕಳೆದ ಎರಡು ತಿಂಗಳಿಂದ ಕಾಲೇಜಿಗೆ ಹೋಗುವುದನ್ನೇ ನಿಲ್ಲಿಸಿದ್ದಳು. ತನ್ನ ಸೋದರ ಮಾವನೊಂದಿಗೆ ಜಗಳವಾಡಿಕೊಂಡು ಮನೆಯಿಂದ ಹೊರಗೆ ಹೋಗಿದ್ದ ನರ್ಸಿಂಗ್ ವಿದ್ಯಾರ್ಥಿನಿಯೊಬ್ಬಳು ಭೀಕರವಾಗಿ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ತೆಲಂಗಾಣದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ತೆಲಂಗಾಣದ ವಿಕಾರಾಬಾದ್ ಜಿಲ್ಲೆಯ ಕಾಲಾಪುರ ಗ್ರಾಮದಲ್ಲಿ ಘಟನೆ ನಡೆದಿದ್ದು, ಮೃತ ಯುವತಿಯನ್ನ ಕಂಡ್ಲಾಪುರ ನಿವಾಸಿ ಸಿರಿಶಾ (19) ಎಂದು ಗುರುತಿಸಲಾಗಿದೆ. ತನ್ನ ಸೋದರ ಮಾವನೊಂದಿಗೆ ಜಗಳವಾಡಿಕೊಂಡು ಮನೆಬಿಟ್ಟು ಹೋಗಿದ್ದ ಸಿರಿಶಾ ಭಾನುವಾರ ನೀರಿನ ಹೊಂಡದಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಸಿರಿಶಾಳನ್ನ ಅಪರಿಚಿತ ದುಷ್ಕರ್ಮಿಗಳು ಕೊಲೆ ಮಾಡಿ ಮೃತದೇಹವನ್ನು ಗ್ರಾಮದ ನೀರಿನ ಹೊಂಡಕ್ಕೆ ಎಸೆದಿದ್ದಾರೆ.
ಶವ ತೇಲುತ್ತಿರುವುದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಸ್ಥಳಕ್ಕೆ ಭೇಟಿ ನೀಡಿ ಶವವನ್ನ ಹೊರತೆಗೆಯಲಾಗಿದೆ ಎಂದು ಪರಿಗಿ ಸಬ್ ಇನ್ಸ್ಪೆಕ್ಟರ್ (SI) ವಿಠ್ಠಲ್ ರೆಡ್ಡಿ ತಿಳಿಸಿದ್ದಾರೆ. ಘಟನೆ ನಂತರ ವಿಕಾರಾಬಾದ್ ಎಸ್ಪಿ ಎನ್.ಕೋಟಿ ರೆಡ್ಡಿ ಅವರು ತನಿಖೆ ನಡೆಸಲು ವಿಶೇಷ ತಂಡ ರಚಿಸಿದ್ದಾರೆ. ಮೃತ ಸಿರಿಶಾಳ ಸೋದರ ಮಾವನನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಆ ರಾತ್ರಿ ನಡೆದಿದ್ದೇನು?
ಮೃತ ಸಿರಿಶಾ ಜೂನ್ 10 ರಂದು ರಾತ್ರಿ 10 ಗಂಟೆ ಸುಮಾರಿಗೆ ತನ್ನ ಸೋದರ ಮಾವನೊಂದಿಗೆ ಜಗಳ ಮಾಡಿಕೊಂಡು ಮನೆಯಿಂದ ಹೊರಗೆ ಹೋಗಿದ್ದಾಳೆ. ಆಕೆ ಮನೆಯಿಂದ ಹೊರಬಂದ ಕೆಲವೇ ನಿಮಿಷಗಳಲ್ಲಿ ದುಷ್ಕರ್ಮಿಗಳು ಕೊಂದು ನೀರಿನ ಹೊಂಡಕ್ಕೆ ಎಸೆದು ಎಸ್ಕೇಪ್ ಆಗಿದ್ದಾರೆ. ಕಣ್ಣುಗಳಿಗೆ ಕಬ್ಬಿಣದ ರಾಡ್ನಿಂದ ಬಲವಾಗಿ ಹೊಡೆದಿದ್ದಾರೆ, ಹರಿತವಾದ ಚಾಕುವಿನಿಂದ ದೇಹದ ಇತರ ಭಾಗಗಳನ್ನ ಕೊಯ್ದು ಭೀಕರವಾಗಿ ಹತ್ಯೆ ಮಾಡಿದ್ದಾರೆ. ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಶಂಕಿತರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.