ವಾಷಿಂಗ್ಟನ್ : ಅಮೆರಿಕದ ಇಂಡಿಯಾನಾ ರಾಜ್ಯದ ಫಿಟ್‌ನೆಸ್ ಸೆಂಟರ್‌ನಲ್ಲಿ ಚಾಕು ಇರಿತಕ್ಕೆ ಒಳಗಾಗಿದ್ದ ಭಾರತೀಯ ಮೂಲದ ವಿದ್ಯಾರ್ಥಿ ಸ್ಥಿತಿ ಗಂಭೀರವಾಗಿದೆ. ಜೀವ ರಕ್ಷಕ ವ್ಯವಸ್ಥೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ. ವಿದ್ಯಾರ್ಥಿ ಪಿ. ವರುಣ್ ರಾಜ್ (24) ಅಮೆರಿಕದಲ್ಲಿ ಕಂಪ್ಯೂಟರ್ ಸೈನ್ಸ್ ಓದುತ್ತಿದ್ದ. ಕಳೆದ ಭಾನುವಾರ ಬೆಳಗ್ಗೆ ದುಷ್ಕರ್ಮಿ ಜೋರ್ಡಾನ್ ಆಂಡ್ರೇಡ್ (24) ಚಾಕುವಿನಿಂದ ವರುಣ್ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೂರು ದಿನಗಳ ಚಿಕಿತ್ಸೆ ಬಳಿಕ ವಿದ್ಯಾರ್ಥಿಗೆ ಜೀವ ರಕ್ಷಕ ವ್ಯವಸ್ಥೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆತನ ದೇಹದ ನರಗಳಿಗೆ ತುಂಬಾ ಹಾನಿಯಾಗಿದೆ. ಶಾಶ್ವತವಾಗಿ ಅಂಗವೈಕಲ್ಯ ಹೊಂದುವ ಸಾಧ್ಯತೆ ಇದೆ. ದೃಷ್ಟಿ ನಷ್ಟ, ದೇಹದ ಎಡಭಾಗದ ಅಂಗಗಳು ಸ್ವಾಧೀನ ಕಳೆದುಕೊಳ್ಳಬಹುದು ಎಂದು ವೈದ್ಯರು ತಿಳಿಸಿದ್ದಾರೆ. ದುಷ್ಕರ್ಮಿ ಜೋರ್ಡಾನ್ ಆಂಡ್ರೇಡ್‌ನನ್ನು ಬಂಧಿಸಲಾಗಿದೆ. ಗಂಭೀರ ಸ್ಥಿತಿಯ ಕಾರಣದಿಂದ ವಿದ್ಯಾರ್ಥಿಯನ್ನು ಫೋರ್ಟ್ ವೇನ್‌ನಲ್ಲಿರುವ ಲುಥೆರನ್ ಆಸ್ಪತ್ರೆಗೆ ವರ್ಗಾಯಿಸಲಾಗಿದೆ. ವಿದ್ಯಾರ್ಥಿ ಮೇಲೆ ನಡೆದ ಕ್ರೂರ ದಾಳಿಯ ಬಗ್ಗೆ ವಿಶ್ವವಿದ್ಯಾನಿಲಯದ ಅಧ್ಯಕ್ಷರು ಆಘಾತ ವ್ಯಕ್ತಪಡಿಸಿದ್ದಾರೆ.
ವರುಣ್ ರಾಜ್ ಮೇಲಿನ ದಾಳಿಯಿಂದ ನಮಗೆ ಆಘಾತ ಮತ್ತು ದುಃಖವಾಗಿದೆ. ವಾಲ್ಪರೈಸೊ ವಿಶ್ವವಿದ್ಯಾನಿಲಯದಲ್ಲಿ ನಾವೆಲ್ಲ ಒಂದೇ ಕುಟುಂಬದವರಂತೆ ಇದ್ದೇವೆ. ವರುಣ್ ಬೇಗ ಗುಣಮುಖನಾಗಲಿ ಎಂದು ನಾವೆಲ್ಲ ಹಾರೈಸುತ್ತೇವೆ. ಈ ಸಂದರ್ಭದಲ್ಲಿ ವಿಶ್ವವಿದ್ಯಾಲಯ ವರುಣ್ ಕುಟುಂಬಸ್ಥರ ಜೊತೆಗಿದೆ ಎಂದು ತಿಳಿಸಿದ್ದಾರೆ.