ಹುಬ್ಬಳ್ಳಿ : ಧಾರವಾಡದಲ್ಲಿ ನಕಲಿ ಮದ್ಯ ಸಾಗಾಟ ಮಾಡುತ್ತಿರುವ ಮಾಹಿತಿ ಮೆರೆಗೆ ಕಾರ್ಯಾಚರಣೆಗೆ ಇಳಿದ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು, ನರೇಂದ್ರ ಟೋಲ್ ಬಳಿ 50 ಲಕ್ಷ ಮೌಲ್ಯದ ನಕಲಿ ಮದ್ಯ ಜಪ್ತಿ ಮಾಡಿದ್ದಾರೆ. ದಾಳಿ ವೇಳೆ ಟ್ಯಾಂಕರ್ ಚಾಲಕ ಪರಾರಿಯಾಗಿದ್ದಾನೆ.
ವೇಸ್ಟ್ ಆಯಿಲ್ ಸಾಗಿಸುವ ನೆಪದಲ್ಲಿ ಬೆಂಗಳೂರಿನಿಂದ ರಾಜಸ್ಥಾನದ ಉದಯಪುರಕ್ಕೆ ಹೊರಟಿದ್ದ ಟ್ಯಾಂಕರ್ನಲ್ಲಿ ನಕಲಿ ಜಿಎಸ್ಟಿ ಬಿಲ್ ಬಳಸಿ ನಕಲಿ ಮದ್ಯ ಸಾಗಿಸಲಾಗುತ್ತಿತ್ತು. ಈ ಟ್ಯಾಂಕರ್ ಅನ್ನು ನರೇಂದ್ರ ಟೋಲ್ ಬಳಿ ತಡೆದು ಪರಿಶೀಲನೆ ನಡೆಸಲಾಗಿದೆ. ಈ ವೇಳೆ ಚಾಲಕ ಪರಾರಿಯಾಗಿದ್ದು, ಟ್ಯಾಂಕರ್ನಲ್ಲಿ ಮದ್ಯದ ಬಾಟಲ್ಗಳು ಪತ್ತೆಯಾಗಿವೆ.
ಟ್ಯಾಂಕರ್ನಲ್ಲಿ ರಾಯಲ್ ಬ್ಲೂ ಹೆಸರಿನ ಸಾವಿರಾರು ವಿಸ್ಕಿ ಬಾಕ್ಸ್ಗಳು ಪತ್ತೆಯಾಗಿದ್ದು, ಲಾರಿ ಸಹಿತ ಮಾಲ್ಗಳನ್ನು ಜಪ್ತಿ ಮಾಡಲಾಗಿದೆ. ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತ ವಿಜಯಕುಮಾರ್ ಸನದಿ ಹಾಗೂ ಉಪ ಆಯುಕ್ತ ಬಾಳಪ್ಪ ಸಂಪಗಾಂವ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಜಪ್ತಿ ಮಾಡಿದ ಟ್ಯಾಂಕರನ್ನು ಅಧಿಕಾರಿಗಳು ಅಬಕಾರಿ ಇಲಾಖೆಗೆ ಹಸ್ತಾಂತರಿಸಲಿದ್ದಾರೆ.