ಬೆಂಗಳೂರು: ಬೆಂಗಳೂರಿನಲ್ಲಿ ಆಸ್ಪತ್ರೆ ವೈದ್ಯರ ಎಡವಟ್ಟಿನಿಂದ ಬಾಲಕನೊಬ್ಬ ನಿರಂತರ 6 ವರ್ಷ ಕೋಮಾದಲ್ಲಿದ್ದು ನರಕ ಯಾತನೆ ಅನುಭವಿಸಿ ಪ್ರಾಣ ಬಿಟ್ಟಿರುವ ವಿಚಾರ ಬೆಳಕಿಗೆ ಬಂದಿದೆ. ಏಪ್ರಿಲ್ 4 ,2017 ರಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಬಾಲಕ ವಿಘ್ನೇಶ್ (20), 2024ರ ಜನವರಿ 3 ರಂದು ಮೃತಪಟ್ಟಿದ್ದಾನೆ. ವೈದ್ಯರ ವಿರುದ್ಧ ಮೃತ ಯುವಕನ ಪೋಷಕರು ಬೆಂಗಳೂರು ನಗರದ ಬನಶಂಕರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಹರ್ನಿಯಾ ಚಿಕಿತ್ಸೆಗೆಂದು 2017ರ ಏಪ್ರಿಲ್ 4 ರಂದು ವಿಘ್ನೇಶ್ನನ್ನು ಪೋಷಕರು ಸುಬ್ರಹ್ಮಣ್ಯನಗರದಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಶಸ್ತ್ರ ಚಿಕಿತ್ಸೆ ಸಮಯದಲ್ಲಿ ವೈದ್ಯರು ಮೂರು ಬಾರಿ ಅನಸ್ತೇಷಿಯ ನೀಡಿದ್ದರು. ಇದರಿಂದಾಗಿ ಪ್ರಜ್ಞೆ ಕಳೆದುಕೊಂಡಿದ್ದ ವಿಘ್ನೇಶ್ ಕೋಮಾಕ್ಕೆ ಜಾರಿದ್ದನು.
ಯುವಕನ ಕುಟುಂಬಸ್ಥರು ಪೊಲೀಸ್ ಠಾಣೆ ಮೆಟ್ಟಿಲೇರುತ್ತಿದ್ದಂತೆ ಎಚ್ಚೆತ್ತ ವೈದ್ಯರು ಚಿಕಿತ್ಸೆ ವೆಚ್ಚ ಭರಿಸೋದಾಗಿ ಹೇಳಿದ್ದರು. ಚಿಕಿತ್ಸೆಗೆಂದು 19 ಲಕ್ಷ ಖರ್ಚು ಮಾಡಲಾಗಿದೆ. ಉಳಿದ ಚಿಕಿತ್ಸೆ ವೆಚ್ಚ ಕೂಡ ನೀಡದೆ ಬೆದರಿಕೆ ಹಾಕಿದ ಆರೋಪ ಕೇಳಿಬಂದಿದೆ. ಈ ನಡುವೆ ಆರು ವರ್ಷಗಳಿಂದ ಕೋಮಾದಲ್ಲಿದ್ದ ವಿಘ್ನೇಶ್ ಜನವರಿ 3 ರಂದು ಮೃತಪಟ್ಟಿದ್ದು, ಆಸ್ಪತ್ರೆ ವೈದ್ಯರ ವಿರುದ್ಧ ಬನಶಂಕರಿ ಪೊಲೀಸ್ ಠಾಣೆಗೆ ಪೋಷಕರು ದೂರು ನೀಡಿರುವ ಪ್ರಕರಣ ದಾಖಲಿಸಿಕೊಂಡ ತನಿಖೆ ಆರಂಭಿಸಿದ್ದಾರೆ.