ಆಕ್ಸಿಜನ್ ಪೂರೈಕೆಯಲ್ಲಿ ಕೆಲವು ನಿಮಿಷ ಆದ ವ್ಯತ್ಯಯದಿಂದ 11 ಕೊರೊನಾ ಸೋಂಕಿತರು ಮೃತಪಟ್ಟ ದಾರುಣ ಘಟನೆ ಆಂಧ್ರಪ್ರದೇಶದ ತಿರುಪತಿಯಲ್ಲಿ ಸಂಭವಿಸಿದೆ.
ಎಸ್ ವಿಆರ್ ರೂಲಾ ಆಸ್ಪತ್ರೆಯಲ್ಲಿ ವೈದ್ಯಕೀಯ ಸಿಬ್ಬಂದಿ ಸೋಂಕಿತರನ್ನು ರಕ್ಷಿಸಲು ಹರಸಾಹಸಪಟ್ಟರೂ ಯಾವುದೇ ಪ್ರಯೋಜನವಾಗಲಿಲ್ಲ. ಆಸ್ಪತ್ರೆಯಲ್ಲಿ ಸೋಂಕಿತರ ಕುಟುಂಬಗಳ ಆಕ್ರಂದನ ಮುಗಿಲುಮುಟ್ಟಿದೆ.
ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಬೆನ್ನಲ್ಲೇ ಆಕ್ಸಿಜನ್ ಬೇಡಿಕೆ ಹೆಚ್ಚುತ್ತಲೇ ಇದೆ. ಇದರಿಂದ ಆಕ್ಸಿಜನ್ ಕೊರತೆಯನ್ನು ಇಡೀ ದೇಶವೇ ಎದುರಿಸುತ್ತಿದ್ದು, ಸೋಂಕಿತರನ್ನು ರಕ್ಷಿಸುವುದು ವೈದ್ಯಕೀಯ ಸಿಬ್ಬಂದಿಗೆ ದೊಡ್ಡ ಸವಾಲಾಗಿದೆ.
ಆಕ್ಸಿಜನ್ ಕೊರತೆ 20ರಿಂದ 25 ನಿಮಿಷ ವ್ಯತ್ಯಯ ಆಗಿತ್ತು ಎಂದು ಕುಟುಂಬಸ್ಥರು ಆರೋಪಿಸಿದರೆ, ಆಸ್ಪತ್ರೆಯ ವೈದ್ಯ ಸಿಬ್ಬಂದಿ 5 ನಿಮಿಷ ಸಮಸ್ಯೆ ಆಗಿತ್ತು ಎಂದು ಹೇಳಿದೆ.