ಚಾಮರಾಜನಗರ : ದ್ವಿತೀಯ ಪಿಯುಸಿ ಪರೀಕ್ಷೆ ಮುಂದೂಡಿ ಇಲ್ಲವೇ ತರಗತಿಗಳನ್ನು ನಡೆಸಿ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರನ್ನು ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ. ಕೊಳ್ಳೇಗಾಲ ನಗರದ ಪ್ರವಾಸಿ ಮಂದಿರಕ್ಕೆ ಭೇಟಿ ನೀಡಿದ್ದ ಶಿಕ್ಷಣ ಸಚಿವರನ್ನು 20ಕ್ಕೂ ಹೆಚ್ಚು ಮಂದಿ ದ್ವಿತೀಯ ಪಿಯು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಪರೀಕ್ಷ ಮುಂದೂಡುವಂತೆ ಆಗ್ರಹಿಸಿದ್ದಾರೆ.
ಇನ್ನು ತರಗತಿಗಳು ನಡೆಯುತ್ತಿಲ್ಲ, ವಿಶೇಷ ತರಗತಿಗಳು ಬಂದ್ ಆಗಿವೆ. ಆನ್ಲೈನ್ ಕ್ಲಾಸ್ ಕೂಡ ಸರಿಯಾಗಿ ನಡೆಯುತ್ತಿಲ್ಲ, ಪಾಠ-ಪ್ರವಚನಗಳು ಮುಗಿದಿಲ್ಲ ಹೀಗಿರುವಾಗ ಪರೀಕ್ಷೆಯನ್ನು ಹೇಗೆ ತಾನೆ ಎದುರಿಸೋದು ಎಂದು ತಮ್ಮ ಅಳಲನ್ನು ತೋಡಿಕೊಂಡು ಪರೀಕ್ಷೆ ಮುಂದೂಡುವಂತೆ ಒತ್ತಾಯಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಪರೀಕ್ಷೆ ಮುಂದೂಡುವುದಾಗಲಿ, ಕೊರೊನಾ ಸಂದಿಗ್ಧತೆಯಲ್ಲಿ ತರಗತಿ ನಡೆಸುವುದಾಗಲಿ ಸರ್ಕಾರದ ಆದೇಶದಂತೆ ಅವಕಾಶವಿಲ್ಲ ಎಂದು ಉತ್ತರಿಸಿ ಹೊರ ನಡೆದಿದ್ದಾರೆ.
ವಿದ್ಯಾರ್ಥಿಗಳ ಪ್ರಶ್ನೆಗೆ ಸರಿಯಾದ ಉತ್ತರ ಸಿಗದ ಕಾರಣ ವಿದ್ಯಾರ್ಥಿಗಳು ಪ್ರಶ್ನೆ ಕೇಳುತ್ತಲೇ ಸಚಿವರ ಹಿಂದೆ ಬಿದ್ದ ಪ್ರಸಂಗ ನಡೆಯಿತು.