ನವದೆಹಲಿ : ಕೋವಿಡ್ ಸೋಂಕಿತರ ಚಿಕಿತ್ಸೆಗೆ ಅಗತ್ಯವಿರುವ ಆಮ್ಲಜನಕ ಹಾಗೂ ರೆಮ್ ಡಿಸಿವಿರ್ ಹೆಚ್ಚುವರಿ ಉತ್ಪಾದನೆ ಹಾಗೂ ಪೂರೈಕೆಗೆ ಕೇಂದ್ರ ಸರ್ಕಾರ ಸಿದ್ಧವಿದ್ದು, ರಾಜ್ಯ ಸರ್ಕಾರಗಳೂ ಪರಸ್ಪರ ಸಹಕರಿಸುವ ಮೂಲಕ ಸವಾಲನ್ನು ಸಮರ್ಥವಾಗಿ ಎದುರಿಸುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಕರೆ ನೀಡಿದ್ದಾರೆ
ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ನಡೆಸಿದ ವಿಡಿಯೋ ಕಾನ್ಫರೆನ್ಸ್ ನಲ್ಲಿ ಈ ವಿಷಯ ತಿಳಿಸಿದ ಅವರು. ಈಗ ಎದುರಾಗಿರುವ ವಿಪತ್ತನ್ನು ಎದುರಿಸಲು ಆರೋಗ್ಯ ಸೇವಾ ವ್ಯವಸ್ಥೆ ಸುಧಾರಣೆಗೆ ಒತ್ತು ನೀಡುವುದು, ಮುನ್ನೆಚ್ಚರಿಕೆಯ ಕ್ರಮಗಳ ಕಟ್ಟುನಿಟ್ಟಿನ ಪಾಲನೆ, ಅನಗತ್ಯ ಆಸ್ಪತ್ರೆಗೆ ದಾಖಲಾಗುವುದನ್ನು ತಪ್ಪಿಸುವುದು ಹಾಗೂ ಆಮ್ಲಜನಕದ ಸಮರ್ಪಕ ಹಾಗೂ ಮಿತಬಳಕೆಗೆ ಆದ್ಯತೆ ನೀಡುವುದು ಹಾಗೂ ಜನರಲ್ಲಿ ವಿಶ್ವಾಸ ಮೂಡಿಸುವುದು ಅತಿ ಅಗತ್ಯ ಎಂದರು.
ಆಮ್ಲಜನಕದ ದುರ್ಬಳಕೆ ಯಾಗದಂತೆ ಎಲ್ಲ ರಾಜ್ಯಗಳಲ್ಲೂ ಆಕ್ಸಿಜನ್ ಆಡಿಟ್ ಮಾಡಿಸಬೇಕು. ಜೊತೆಗೆ ಆಮ್ಲಜನಕದ ಟ್ಯಾಂಕರು ಗಳ ಸುಗಮ ಸಂಚಾರಕ್ಕೆ ರಾಜ್ಯ ಸರ್ಕಾರಗಳು ವ್ಯವಸ್ಥೆ ಮಾಡಬೇಕು ಎಂದು ಸೂಚಿಸಿದರು.
ಆಮ್ಲಜನಕ ಮತ್ತು ರೆಮ್ ಡಿಸಿವಿರ್ ಸದ್ಬಳಕೆಯಾಗುವ ನಿಟ್ಟಿನಲ್ಲಿ ಆತಂಕದ ಕೊಳ್ಳುವಿಕೆಯನ್ನು ನಿಯಂತ್ರಿಸಬೇಕು. ಹೆಚ್ಚುತ್ತಿರುವ ಪ್ರಕರಗಳಿಂದಾಗ ಮಾನವ ಸಂಪನ್ಮೂಲ ಅಗತ್ಯತೆಯೂ ಹೆಚ್ಚುತ್ತಿದ್ದು, ಇತ್ತೀಚೆಗೆ ನಿವೃತ್ತರಾದ ಸಿಬ್ಬಂದಿಯ ಸೇವೆ ಬಳಕೆ ಮಾಡಿಕೊಳ್ಳಿ ಎಂದು ಸಲಹೆ ನೀಡಿದರು.
ಆಮ್ಲಜನಕ ಪೂರೈಕೆಗೆ ಮನವಿ:
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ವಿಡಿಯೋ ಕಾನ್ಫರೆನ್ಸ್ ನಲ್ಲಿ ಮಾತನಾಡಿ, ರಾಜ್ಯದಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ಕೈಗೊಳ್ಳುತ್ತಿರುವ ಕ್ರಮಗಳು ಹಾಗೂ ರಾಜ್ಯದ ವಸ್ತುಸ್ಥಿತಿಯನ್ನು ವಿವರಿಸಿದರು.
ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿ ರಾಜ್ಯಕ್ಕೆ ದಿನಕ್ಕೆ 1471 ಟನ್ ಆಮ್ಲಜನಕ ಹಂಚಿಕೆ ಮಾಡುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದರು.
ರಾಜ್ಯದಲ್ಲಿ ಆಮ್ಲಜನಕದ ಬಳಕೆ ದಿನೇ ದಿನೇ ಹೆಚ್ಚುತ್ತಿದ್ದು, ನಿನ್ನೆ ರಾಜ್ಯದಲ್ಲಿ 500 ಟನ್ ಬಳಕೆಯಾಗಿದೆ. ಕೇಂದ್ರ ಸರ್ಕಾರವು ರಾಜ್ಯಕ್ಕೆ ಕೇವಲ 300 ಟನ್ ಆಮ್ಲಜನಕ ಹಂಚಿಕೆ ಮಾಡಿದ್ದು, ಇದೇ ಪರಿಸ್ಥಿತಿ ಮುಂದುವರೆದರೆ ಹಲವು ಆರೋಗ್ಯ ಸೇವಾ ಕೇಂದ್ರಗಳನ್ನು ಮುಚ್ಚುವ ಪರಿಸ್ಥಿತಿ ಎದುರಾಗುವುದು.
ಭಾರತ ಸರ್ಕಾರದ ಮಾರ್ಗಸೂಚಿಗಳನ್ವಯ ರಾಜ್ಯಕ್ಕೆ ಏಪ್ರಿಲ್ 25 ರಿಂದ 1142 ಟನ್ ಆಮ್ಲಜನಕ ಅಗತ್ಯವಿದೆ ಹಾಗೂ ಏಪ್ರಿಲ್ 30ರ ನಂತರ 1471 ಟನ್ ಆಮ್ಲಜನಕದ ಅಗತ್ಯವಿದೆ. ಆಮ್ಲಜನಕ ಕೊರತೆ ನೀಗಿಸಿ, ಕೂಡಲೇ 1471 ಟನ್ ಆಮ್ಲಜನಕ ಹಂಚಿಕೆ ಮಾಡುವಂತೆ ಮುಖ್ಯಮಂತ್ರಿಗಳು ಪ್ರಧಾನಿಯವರಲ್ಲಿ ಮನವಿ ಮಾಡಿದರು.
ಲಸಿಕೆ ಕಾರ್ಯಕ್ರಮದ ಪ್ರಗತಿಯೂ ಉತ್ತಮವಾಗಿದ್ದು, ಈ ವರೆಗೆ 82 ಲಕ್ಷ ಜನರಿಗೆ ಲಸಿಕೆ ನೀಡಲಾಗಿದೆ. ಮೇ 1 ರಿಂದ ಹೊಸ ಲಸಿಕಾ ನೀತಿ ಜಾರಿಗೆ ಬರುತ್ತಿರುವ ಹಿನ್ನೆಲೆಯಲ್ಲಿ ಎಲ್ಲ ರಾಜ್ಯಗಳಿಗೂ ಲಸಿಕೆಗಳು ಸಮಾನವಾಗಿ ಹಂಚಿಕೆಯಾಗುವಂತೆ ಕ್ರಮ ಕೈಗೊಳ್ಳಲು ಮುಖ್ಯಮಂತ್ರಿಗಳು ಮನವಿ ಮಾಡಿದರು.