ಎರಡನೇ ಸೋಲಿನಿಂದ ಕಂಗೆಟ್ಟಿದ್ದ ಇಂಗ್ಲೆಂಡ್ ಬೌಲರ್ ಗಳು ನೀಡಿದ ತಿರುಗೇಟಿಗೆ ತತ್ತರಿಸಿದ ಭಾರತ ತಂಡ ಮೂರನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ 78 ರನ್ ಗಳ ಕಳಪೆ ಮೊತ್ತಕ್ಕೆ ಆಲೌಟಾಗಿದೆ.
ಲೀಡ್ಸ್ ಮೈದಾನದಲ್ಲಿ ಬುಧವಾರ ಆರಂಭಗೊಂಡ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಲು ನಿರ್ಧರಿಸಿದ ಭಾರತ ತಂಡ ಆರಂಭದಿಂದಲೇ ಸತತವಾಗಿ ವಿಕೆಟ್ ಕಳೆದುಕೊಂಡು ಕಳಪೆ ಮೊತ್ತಕ್ಕೆ ಪತನಗೊಂಡಿತು.
ಭಾರತದ ಪರ ರೋಹಿತ್ ಶರ್ಮ ಮತ್ತು ಅಜಿಂಕ್ಯ ರಹಾನೆ ಎರಡಂಕಿ ದಾಟಿದ ಸಾಧನೆ ಮಾಡಿದರು. ಅದರಲ್ಲೂ ಹೊಡಿಬಡಿ ಆಟಕ್ಕೆ ಹೆಸರಾದ ರೋಹಿತ್ ಶರ್ಮ ವೃತ್ತಿಜೀವನದಲ್ಲೇ ಮೊದಲ ಬಾರಿ ನಿಧಾನಗತಿ ಆಟವಾಡಿದರೂ ದೊಡ್ಡ ಮೊತ್ತ ಪೇರಿಸಲು ವಿಫಲರಾದರು.
ರೋಹಿತ್ ಶರ್ಮ 105 ಎಸೆತಗಳನ್ನು ಎದುರಿಸಿ ಕೇವಲ ಒಂದು ಬೌಂಡರಿ ನೆರವಿನೊಂದಿಗೆ 19 ರನ್ ಗಳಿಸಿದರೆ, ಅಜಿಂಕ್ಯ ರಹಾನೆ 54 ಎಸೆತಗಳಲ್ಲಿ 3 ಬೌಂಡರಿ ಸಹಾಯದಿಂದ 18 ರನ್ ಗಳಿಸಿ ಔಟಾದರು.
ಇಂಗ್ಲೆಂಡ್ ಪರ ಜೇಮ್ಸ್ ಆಂಡರ್ಸನ್ 3 ವಿಕೆಟ್ ಪಡೆದರೆ, ಓಲಿ ರಾಬಿನ್ಸನ್, ಸ್ಯಾಮ್ ಕುರಿಯನ್ ಮತ್ತು ಕ್ರೇಗ್ ಓವರ್ಟನ್ ತಲಾ 2 ವಿಕೆಟ್ ಗಳಿಸಿದರು.