ರಾಜಧಾನಿ ಬೆಂಗಳೂರಿನಲ್ಲಿ ಮೇ 2ರಿಂದ 19ರವರೆಗೆ 778 ಕೊರೊನಾ ಸೋಂಕಿತರು ನಾನಾ ಕಾರಣಗಳಿಂದ ಮನೆಯಲ್ಲೇ ಮೃತಪಟ್ಟಿರುವ ಆಘಾತಕಾರಿ ಸಂಗತಿ ಬಿಬಿಎಂಪಿಯ ಡೆತ್ ಆಡಿಟ್ ರಿಪೋರ್ಟ್ ನಲ್ಲಿ ಬಹಿರಂಗವಾಗಿದೆ.
ಚಿಕಿತ್ಸೆ ದೊರೆಯದೇ, ಬೆಡ್ ಸಿಗದೆ ಮತ್ತು ಸೋಂಕಿನ ಬಗ್ಗೆ ಅರಿವು ಇಲ್ಲದೆ ಹೀಗೆ ನಾನಾ ಕಾರಣಗಳಿಂದ ಜನರು ಮನೆಯಲ್ಲೇ ಮೃತಪಟ್ಟಿದ್ದು, ಇದರಲ್ಲಿ ಬಿಬಿಎಂಪಿಯ ವೈಫಲ್ಯ ಎದ್ದು ಕಾಣುತ್ತಿದೆ.
ಮೇ 6 ರಂದು 52 ಜನ, ಮೇ- 7 ರಂದು 64 ಜನ, ಮೇ-10 ರಂದು 70 ಜನ, ಮೇ -11 ರಂದು 61 ಜನ, ಮೇ -17 ರಂದು 70 ಜನ, ಮೇ-18 ರಂದು 86 ಮಂದಿ ಸೋಂಕಿತರು ಮನೆಯಲ್ಲಿಯೇ ಮೃತಪಟ್ಟಿದ್ದಾರೆ ಎಂದು ಬಿಬಿಎಂಪಿ ಡೆತ್ ಆಡಿಟ್ ರಿಪೋರ್ಟ್ ಹೇಳಿದೆ.
ಬೆಂಗಳೂರಿನಲ್ಲಿ ಕೊರೊನಾ ಟೆಸ್ಟಿಂಗ್ ಕೂಡಾ ಕಡಿಮೆ ಮಾಡಿರುವುದು ಸೋಂಕಿತರ ಪತ್ತೆ ಹಚ್ಚುವಲ್ಲಿ ವಿಫಲವಾಗುತ್ತಿದೆ. ಅಲ್ಲದೇ ಸೋಂಕಿನ ಮಾಹಿತಿ ಇಲ್ಲದೇ ಜನರು ಮನೆಯಲ್ಲೇ ಸಾಯುತ್ತಿರುವ ಘಟನೆಗಳು ಹೆಚ್ಚಾಗುತ್ತಿದೆ.
ಇನ್ನೊಂದೆಡೆ ಕೋವಿಡ್ ರಿಪೋರ್ಟ್ ತಡವಾಗಿ ಬರುತ್ತಿರುವುದರಿಂದ ಸ್ವ್ಯಾಬ್ ಟೆಸ್ಟ್ ಕೊಟ್ಟು ರಿಪೋರ್ಟ್ ಬರುವ ಮುನ್ನವೇ ಸೋಂಕಿತರು ಸಾವನ್ನಪ್ಪುತ್ತಿದ್ದಾರೆ. 778 ಜನ ಹೋಂ ಐಸೋಲೇಷನ್ನಲ್ಲೇ ಮೃತಪಟ್ಟಿದ್ದಾರೆ ಎಂದು ಡೆತ್ ರಿಪೋರ್ಟ್ ಮೂಲಕ ಗೊತ್ತಾಗಿದೆ.
ಆಸ್ಪತ್ರೆಯಲ್ಲಿಯೋ, ಮನೆಯಲ್ಲಿಯೂ, ಆಮ್ಲಜನಕದ ಕೊರತೆಯಿಂದಲೂ, ಐಸಿಯೂ ಬೆಡ್ ಸಮಸ್ಯೆಯಿಂದಲೋ ಎಂಬ ಬಗ್ಗೆ ಆಳವಾದ ತನಿಖೆ ಆಗಬೇಕಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಪ್ರತಿಕ್ರಿಯಿಸಿದ್ದಾರೆ.