ತೌಕ್ತೆ ಚಂಡಮಾರುತಕ್ಕೆ ಸಿಲುಕಿ ಸಮುದ್ರದ ಮಧ್ಯೆ ಸುಮಾರು 40 ಗಂಟೆ ಜೀವ ಕೈಲಿ ಹಿಡಿದು ಕುಳಿತಿದ್ದ ಕೋರಮಂಡಲ್ ಟಗ್‌ನ ಎಲ್ಲಾ 9 ಸಿಬ್ಬಂದಿಗಳನ್ನೂ ಸುರಕ್ಷಿತವಾಗಿ ಮಂಗಳೂರಿಗೆ ಕರೆತರಲಾಗಿದೆ.
ಕೊಚ್ಚಿನ್ ನಿಂದ ಇವತ್ತು ಬೆಳಗ್ಗೆ ಆಗಮಿಸಿದ ರಕ್ಷಣೆ ಇಲಾಖೆಯ ಹೆಲಿಕಾಪ್ಟರ್ ಮೂಲಕ ಟಗ್ ಸಿಬ್ಬಂದಿಗಳನ್ನು ಅದರಿಂದ ಮೇಲೆತ್ತಿ ಕೋಸ್ಟ್‌ಗಾರ್ಡ್ ನೌಕೆಗೆ ಇಳಿಸಲಾಗಿದ್ದು, ಅವರನ್ನು ಮಂಗಳೂರಿಗೆ ಕರೆ ತರಲಾಯಿತು.
ಶನಿವಾರ ನವಮಂಗಳೂರು ಬಂದರಿನ ಹೊರ ಆಂಕರೇಜ್ ಸಮೀಪ ಸಂಪರ್ಕ ಕಡಿತಗೊಂಡು ಚಂಡ ಮಾರುತದ ಹೊಡೆತಕ್ಕೊಳಗಾಗಿ ಕಾಪು ಲೈಟ್ ಹೌಸ್ ಸಮೀಪದ 15 ಕಿ.ಮೀ ದೂರದಲ್ಲಿರುವ ಸಮುದ್ರ ಬಂಡೆ ಮಧ್ಯೆ ಈ ಟಗ್ ಸಿಲುಕಿಕೊಂಡಿತು. ನಿನ್ನೆ ಇಡೀ ದಿನ ಈ ಸಿಬ್ಬಂದಿಗಳ ರಕ್ಷಣೆಗೆ ಪ್ರಯತ್ನ ನಡೆಸಲಾಗಿದ್ದರೂ ಹವಾಮಾನ ವೈಪರೀತ್ಯ, ಕಡಲಿನ ಅಬ್ಬರದಿಂದ ಕಾರ್ಯಾಚರಣೆ ಯಶಸ್ವಿಯಾಗಿರಲಿಲ್ಲ.
ಕರಾವಳಿಯಲ್ಲಿ ಸಿಲುಕಿದ್ದ 9 ಮೀನುಗಾರರನ್ನು ಹೆಲಿಕಾಫ್ಟರ್ ಮೂಲಕ ರಕ್ಷಿಸಿದ ಕೋಸ್ಟ್ ಗಾರ್ಡ್ ಸಿಬ್ಬಂದಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಭಿನಂದನೆ ಸಲ್ಲಿಸಿದ್ದಾರೆ.