ಪ್ರವಾದಿ ಮೊಹಮ್ಮದ್ ಕುರಿತು ಬಿಜೆಪಿಯಿಂದ ಉಚ್ಚಾಟಿತಗೊಂಡಿರುವ ಮುಖಂಡರಾದ ನೂಪುರ್ ಶರ್ಮಾ ಹಾಗೂ ನವೀನ್ ಕುಮಾರ್ ಜಿಂದಾಲ್ ವಿರುದ್ಧದ ಪ್ರತಿಭಟನೆ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ದೇಶದ ಹಲವೆಡೆ ಭಾರಿ ಗಲಭೆ ಉಂಟಾಗಿದೆ.
ದಿಲ್ಲಿ, ಉತ್ತರ ಪ್ರದೇಶ, ಜಾರ್ಖಂಡ್ನ ರಾಂಚಿ, ಗುಜರಾತ್ನ ಅಹ್ಮದಾಬಾದ್, ಮಹಾರಾಷ್ಟ್ರದ ಮುಂಬಯಿ, ಪಂಜಾಬ್ನ ಲುಧಿಯಾನ, ಪಶ್ಚಿಮ ಬಂಗಾಳದ ಹೌರಾ, ತೆಲಂಗಾಣದ ಹೈದರಾಬಾದ್ ಹಾಗೂ ಜಮ್ಮು-ಕಾಶ್ಮೀರದ ಹಲವೆಡೆ ಹಿಂಸಾಚಾರ ನಡೆದಿದ್ದು, ಪೊಲೀಸರು ನೂರಾರು ಜನರನ್ನು ಬಂಧಿಸಿದ್ದಾರೆ. ರಾಂಚಿಯಲ್ಲಿ ಹಿಂಸಾತ್ಮಕ ಪ್ರತಿಭಟನೆ ನಡೆದಿದ್ದು, ಇಬ್ಬರು ಮೃತಪಟ್ಟಿದ್ದಾರೆ. ಒಟ್ಟು 22 ಜನ ಗಾಯಗೊಂಡಿದ್ದು, ಇವರಲ್ಲಿ ಪೊಲೀಸರು ಸಹ ಸೇರಿದ್ದಾರೆ. ಗಾಯಗೊಂಡವರಲ್ಲಿ ಮೂವರ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ : – ಪ್ರವಾದಿ ಕುರಿತ ಹೇಳಿಕೆ ವಿವಾದ -ಬಂಗಾಳದಲ್ಲಿ ಇಂಟರ್ನೆಟ್ ಸ್ಥಗಿತ – ಉತ್ತರಪ್ರದೇಶದಲ್ಲಿ 227 ಮಂದಿ ಬಂಧನ
ಬಂಗಾಳದ ಹೌರಾದಲ್ಲೂ 2ನೇ ದಿನವೂ ಪ್ರತಿಭಟನೆ ಹಿಂಸಾರೂಪ ಪಡೆದಿದ್ದು, ಬಿಜೆಪಿ ಕಚೇರಿಗೆ ದಾಳಿ ನಡೆಸಿ, ಧ್ವಂಸಗೊಳಿಸಲಾಗಿದೆ. ಮತ್ತೊಂದೆಡೆ, ಹೌರಾಗೆ ತೆರಳಲು ಮುಂದಾದ ಬಿಜೆಪಿ ರಾಜ್ಯಾಧ್ಯಕ್ಷ ಸುಕಾಂತ ಮಜುಮ್ದಾರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಮುರ್ಷಿದಾಬಾದ್ನ ವಿವಿಧೆಡೆ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ. ಹಾಗೆಯೇ, ಹೌರಾದ ಹಲವೆಡೆ ಜೂನ್ 13ರವರೆಗೆ ಸೆಕ್ಷನ್ 144 ಜಾರಿಯಾಗಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.
ಇದನ್ನೂ ಓದಿ : – ನೂಪುರ್ ಶರ್ಮಾ ಹೇಳಿಕೆ ವಿರೋಧಿಸಿ ದೇಶದಾದ್ಯಂತ ಪ್ರತಿಭಟನೆ – ಬಂಧನಕ್ಕೆ ಆಗ್ರಹ