ರಾಜ್ಯದಲ್ಲಿ ಕೊರೊನಾ ಲಸಿಕೆ ಅಭಾವದ ಹಿನ್ನೆಲೆಯಲ್ಲಿ 18 ವರ್ಷದಿಂದ 44ರ ವಯಸ್ಸಿನವರಿಗೆ ಕೊರೊನಾ ಲಸಿಕೆ ನೀಡುವುದನ್ನು ಸ್ಥಗಿತಗೊಳಿಸಲು ರಾಜ್ಯ ಸರಕಾರ ನಿರ್ಧರಿಸಿದೆ.
ಬುಧವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಚಿವರು ಹಾಗೂ ಅಧಿಕಾರಿಗಳ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, 45 ವರ್ಷ ಮೇಲ್ಪಟ್ಟವರಿಗೆ ಮಾತ್ರ ಲಸಿಕೆ ನೀಡಲು ತೀರ್ಮಾನಿಸಲಾಗಿದೆ.
ಮಹಾರಾಷ್ಟ್ರ ಮಾದರಿಯಲ್ಲಿ ವ್ಯಾಕ್ಸಿನ್ ಹಂಚಿಕೆ ಮಾಡುವ ಉದ್ದೇಶದಿಂದ ಪ್ರಸ್ತುತ ಮೊದಲ ಲಸಿಕೆ ಪಡೆದವರಿಗೆ 2ನೇ ಡೋಸ್ ಪಡೆಯುವವರಿಗೆ ವ್ಯಾಕ್ಸಿನ್ ಮೀಸಲಿಡಲು ತೀರ್ಮಾನಿಸಲಾಗಿದೆ.
ಪ್ರಸ್ತುತ ಈಗಿನ ಸನ್ನಿವೇಶದಲ್ಲಿ ಈ ತಿಂಗಳ ಅಂತ್ಯಕ್ಕೂ ಕೊರೊನಾ ಲಸಿಕೆ ಬರುವುದು ಅನುಮಾನವಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರದಿಂದ ಹಾಗೂ ಕಂಪನಿಯಿಂದ ಸಂಪೂರ್ಣವಾಗಿ ಲಸಿಕೆ ಬಂದ ಬಳಿಕವಷ್ಟೇ 18ರಿಂದ 44 ವರ್ಷದವರಿಗೆ ವ್ಯಾಕ್ಸಿನ್ ನೀಡಲು ನಿರ್ಧರಿಸಲಾಗಿದೆ.
ಸದ್ಯ ಲಭ್ಯವಿರುವ ಲಸಿಕೆಯನ್ನು 45 ವರ್ಷ ಮೇಲ್ಪಟ್ಟವರಿಗೆ ಮಾತ್ರ ಮೀಸಲಿಡಲು ನಿರ್ಧರಿಸಲಾಗಿದೆ.
ಜೂನ್ ಮೊದಲ ಅಥವಾ ಎರಡನೇ ವಾರದಲ್ಲಿ ವ್ಯಾಕ್ಸಿನ್ ಬರುವ ಸಾಧ್ಯತೆ ಇದ್ದು, ನಂತರ ಎಲ್ಲರಿಗೂ ನೀಡಲು ದಿನಾಂಕ ನಿಗದಿಪಡಿಸಲಾಗುವುದು. ಅಲ್ಲದೇ ವ್ಯಾಕ್ಸಿನ್ ಹಂಚಿಕೆ ಗೊಂದಲ ಆಗದೇ ಇರಲು ಮೊಬೈಲ್ ಆ್ಯಪ್ ತಯಾರಿಸಲು ತೀರ್ಮಾನಿಸಲಾಯಿತು.
ಮೊಬೈಲ್ ಆ್ಯಪ್ ನಲ್ಲಿ ಯಾವ ಹಂತದ ಡೋಸ್ ನೀಡಲಾಗಿದೆ. ಯಾರಿಗೆ ನೀಡಲಾಗಿದೆ. ಎಷ್ಟು ಸಂಗ್ರಹ ಇದೆ ಮುಂತಾದ ಎಲ್ಲಾ ಮಾಹಿತಿ ಆ್ಯಪ್ ನಲ್ಲಿ ಇರಲಿದೆ.