ಕಾಠ್ಮಂಡು: ನೇಪಾಳ ರಾಜಧಾನಿಯಲ್ಲಿ ವಾಯುಮಾಲಿನ್ಯ ಅಪಾಯದ ಮಟ್ಟ ಮೀರಿದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ನಾಲ್ಕು ದಿನಗಳ ಕಾಲ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಕೊರೊನಾ ಸಾಂಕ್ರಾಮಿಕ ರೋಗದ ನಡುವೆ ವಾಯುಮಾಲಿನ್ಯವನ್ನು ನಿಯಂತ್ರಣಕ್ಕೆ ತರುವುದು ಸರ್ಕಾರಕ್ಕೆ ಈಗ ಸವಾಲಾಗಿ ಪರಿಣಮಿಸಿದೆ.
ಕಟ್ಟಡ ಕಾಮಗಾರಿಯಿಂದ ಉಂಟಾಗುವ ಧೂಳು, ಹಳೆಯ ಮತ್ತು ಸರಿಯಾಗಿ ನಿರ್ವಹಣೆ ಕಾಣದ ವಾಹನಗಳು, ಅದರ ಹೊಗೆ ಇತ್ಯಾದಿಗಳಿಂದ ವಾಯುಮಾಲಿನ್ಯ ಹೆಚ್ಚಾಗುತ್ತಿದೆ. ಇದರಿಂದ ಕ್ಯಾನ್ಸರ್, ಪಾರ್ಶ್ವವಾಯು, ಅಸ್ತಮಾ ಮತ್ತು ಅತಿಯಾದ ರಕ್ತದೊತ್ತಡ ಮುಂತಾದ ಸಮಸ್ಯೆಗಳ ಅಪಾಯ ಹೆಚ್ಚುತ್ತಿದೆ. ಕೊವಿಡ್-19 ಆತಂಕವೂ ಹೆಚ್ಚಿದೆ ಎಂದು ಸರ್ಕಾರದ ಉನ್ನತ ಮೂಲಗಳು ಮಾಹಿತಿ ನೀಡಿವೆ.
ಶ್ವಾಸಕೋಶಕ್ಕೆ ಹಾನಿ ಮಾಡಬಲ್ಲ ಪಿಎಂ ಮಟ್ಟ ಹೆಚ್ಚುತ್ತಿದೆ. ಚಿಕ್ಕ ಮಕ್ಕಳ ಆರೋಗ್ಯಕ್ಕೆ ಇದು ಬಹಳ ಅಪಾಯಕಾರಿ. ಹೀಗಾಗಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಚೀನಾ ಮತ್ತು ಭಾರತದ ಬಳಿಕ ನೇಪಾಳ ಇದೀಗ ವಾಯುಮಾಲಿನ್ಯದ ಸಮಸ್ಯೆಯನ್ನು ಎದುರಿಸುತ್ತಿದೆ.