ಭಾರತದ ರಕ್ಷಣಾ ಮತ್ತು ಸಂಶೋಧನಾ ಸಂಸ್ಥೆ ಡಿಆರ್ ಡಿಒ ಸಂಸ್ಥೆ ಅಭಿವೃದ್ಧಿಪಡಿಸಿದ ಕೋವಿಡ್ ನಿರೋಧಕ ಔಷಧಿಯನ್ನು ತುರ್ತು ಸಂದರ್ಭದಲ್ಲಿ ಬಳಸಲು ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ಅನುಮತಿ ನೀಡಿದೆ.
ಡಿಆರ್ ಡಿಒ ಅಭಿವೃದ್ಧಿಪಡಿಸಿದ ಆ್ಯಂಟಿ-ಕೋವಿಡ್ ಔಷಧಿ (2-ಡಿಯೋಕ್ಸಿ-ಡಿ-ಗ್ಲೂಕೋಸ್)ಯ ತುರ್ತು ಬಳಕೆಗೆ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಅನುಮೋದನೆ ನೀಡಿದೆ. ಈ ಮೂಲಕ ಸ್ವದೇಶೀ ನಿರ್ಮಿತ ಮತ್ತೊಂದು ಔಷಧ ಭಾರತಕ್ಕೆ ಲಭಿಸಿದಂತಾಗಿದೆ.
ಹೈದರಾಬಾದ್‌ನ ಡಾ. ರೆಡ್ಡೀಸ್ ಪ್ರಯೋಗಾಲಯಗಳ ಸಹಯೋಗದೊಂದಿಗೆ ಡಿಆರ್‌ಡಿಒನ ಪ್ರಯೋಗಾಲಯದಲ್ಲಿ 2-ಡಿಯೋಕ್ಸಿ-ಡಿ-ಗ್ಲೂಕೋಸ್ (2-ಡಿಜಿ) ಔಷಧದ ಆ್ಯಂಟಿ ಕೋವಿಡ್ ಚಿಕಿತ್ಸಕವನ್ನು ಇನ್ಸ್ಟಿಟ್ಯೂಟ್ ಆಫ್ ನ್ಯೂಕ್ಲಿಯರ್ ಮೆಡಿಸಿನ್ ಮತ್ತು ಅಲೈಡ್ ಸೈನ್ಸಸ್ (INMAS) ಅಭಿವೃದ್ಧಿಪಡಿಸಿದೆ ಎಂದು ಡಿಆರ್‌ಡಿಒ ಹೇಳಿದೆ.
2-ಡಿಜಿ ಔಷಧ ಆಸ್ಪತ್ರೆಗೆ ದಾಖಲಾದ ರೋಗಿಗಳನ್ನು ವೇಗವಾಗಿ ಚೇತರಿಸಿಕೊಂಡಿರುವುದು ಕ್ಲಿನಿಕಲ್ ಪ್ರಯೋಗಗಳಲ್ಲಿ ದೃಢಪಟ್ಟಿದೆ. ಇದು ಆಕ್ಸಿಜನ್ ಅವಲಂಬನೆಯನ್ನು ಕಡಿಮೆ ಮಾಡುತ್ತಿದೆ ಎಂದು ಡಿಆರ್‌ಡಿಒ ಹೇಳಿದೆ. 2020ರ ಏಪ್ರಿಲ್ ಸಾಂಕ್ರಾಮಿಕ ರೋಗದ ಮೊದಲ ಅಲೆ ಶುರವಾದಾಗಲೇ ಐಎನ್‌ಎಂಎಎಸ್-ಡಿಆರ್‌ಡಿಒ ವಿಜ್ಞಾನಿಗಳು ಹೈದರಾಬಾದ್‌ನ ಸೆಂಟರ್ ಫಾರ್ ಸೆಲ್ಯುಲಾರ್ ಮತ್ತು ಮಾಲಿಕ್ಯೂಲರ್ ಬಯಾಲಜಿ (ಸಿಸಿಎಂಬಿ) ಪ್ರಯೋಗಾಲಯದಲ್ಲಿ ಪ್ರಯೋಗ ಶುರು ಮಾಡಿತ್ತು. ಈ ಔಷಧ ಎಸ್‌ಎಆರ್ಎಸ್-ಕೋವಿ-2 ವೈರಸ್ ವಿರುದ್ಧ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ, ಜೊತೆಗೆ ಸೋಂಕನ್ನು ತಡೆಯುತ್ತದೆ ಎಂಬುದನ್ನು ಕಂಡುಹಿಡಿದಿದೆ ಎಂದು ಡಿಆರ್ ಡಿಒ ಹೇಳಿದೆ.